Advertisement

ಶಹಾಪುರ ನಗರಸಭೆಗೆ 29ರಂದು ಚುನಾವಣೆ

12:54 PM May 07, 2019 | Naveen |

ಯಾದಗಿರಿ: ರಾಜ್ಯ ಚುನಾವಣಾ ಆಯೋಗವು ಶಹಾಪುರ ನಗರಸಭೆ ಸ್ಥಳೀಯ ಸಂಸ್ಥೆ ಸಾರ್ವತ್ರಿಕ ಚುನಾವಣೆ ಮತ್ತು ಸುರಪುರ ತಾಲೂಕು ಪಂಚಾಯಿತಿಯ 2 ಕ್ಷೇತ್ರ ಹಾಗೂ 3 ವಿವಿಧ ಗ್ರಾಮ ಪಂಚಾಯಿತಿ ಕ್ಷೇತ್ರಗಳ ಉಪ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಮೇ 29ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಪುರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಹೆಬ್ಟಾಳ (ಬಿ), ಗೆದ್ದಲಮರಿ ಕ್ಷೇತ್ರಗಳಿಗೆ ಹಾಗೂ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಣಗಿ, ಕಾಮನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮನಟಗಿ, ಸುರಪುರ ತಾಲೂಕಿನ ಅಗ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗತೀರ್ಥ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

ಅಗತೀರ್ಥ ಕ್ಷೇತ್ರದ ಸದಸ್ಯ ರಾಜೀನಾಮೆಯಿಂದ ತೆರವಾಗಿರುವ ಪ್ರಯುಕ್ತ ಮತ್ತು ಉಳಿದ ತಾಪಂ ಹಾಗೂ ಗ್ರಾಪಂ ಕ್ಷೇತ್ರಗಳ ಸದಸ್ಯರು ಮೃತರಾದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಚುನಾವಣೆ ನಡೆಯುವ ಶಹಾಪುರ ತಾಲೂಕಿನ ಶಹಾಪುರ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಮೇ 2ರಿಂದ ಚುನಾವಣಾ ನೀತಿ ಸಂಹಿತಿ ಜಾರಿಗೆ ಬಂದಿದೆ. ಉಪ ಚುನಾವಣೆ ನಡೆಯುವ ತಾಲೂಕು/ ಗ್ರಾಮ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ 13ರಿಂದ ನೀತಿ ಸಂಹಿತಿಯು ಜಾರಿಗೆ ಬರಲಿದ್ದು, ಮೇ 31ರ ವರೆಗೆ ಜಾರಿಯಲ್ಲಿರುತ್ತದೆ. ಸರ್ಕಾರದ ಅಧಿಸೂಚನೆಯಂತೆ ನಗರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿಯು 2 ಲಕ್ಷ ರೂ. ವರೆಗೆ ನಿಗದಿಪಡಿಸಲಾಗಿರುತ್ತದೆ. ತಾಲೂಕು ಪಂಚಾಯಿತಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿ 50 ಸಾವಿರ ರೂ. ವರೆಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಶಹಾಪುರ ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, 51 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2019ರ ಜನವರಿ 2ರಂತೆ 23,436 ಪುರುಷ ಮತದಾರರು, 23,321 ಮಹಿಳಾ ಮತದಾರರು ಹಾಗೂ 8 ಇತರೆ ಮತದಾರರು ಸೇರಿದಂತೆ ಒಟ್ಟು 46,765 ಮತದಾರರಿದ್ದಾರೆ.

2019ರ ಏಪ್ರಿಲ್ 4ರಂತೆ ಹೆಬ್ಟಾಳ (ಬಿ) ತಾಲೂಕು ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ 4,232 ಪುರುಷ ಮತ್ತು 3,936 ಮಹಿಳೆ ಹಾಗೂ ಇತರೆ 1 ಮತದಾರರು ಸೇರಿದಂತೆ ಒಟ್ಟು 8,169 ಮತದಾರರಿದ್ದು, 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗೆದ್ದಲಮರಿ ತಾಲೂಕು ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ 5,230 ಪುರುಷ ಮತ್ತು 5,204 ಮಹಿಳಾ ಮತದಾರರು ಸೇರಿದಂತೆ ಒಟ್ಟು 10,434 ಮತದಾರರಿದ್ದಾರೆ. ಕರಣಗಿ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ 303 ಪುರುಷ, 298 ಮಹಿಳಾ ಮತದಾರರಿದ್ದಾರೆ. ಕಾಮನಟಗಿ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ 888 ಪುರುಷ, 883 ಮಹಿಳಾ ಮತದಾರರಿದ್ದಾರೆ. ಅಗತೀರ್ಥ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ 415 ಪುರುಷ, 441 ಮಹಿಳಾ ಮತದಾರರಿದ್ದಾರೆ.

Advertisement

ನೋಟಾ: ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇರುವ ವ್ಯಕ್ಯಿಯು, ತನ್ನ ಇಚ್ಛೆಯಂತೆ ಯಾರೊಬ್ಬರಿಗೂ ತನ್ನ ಮತ ನೀಡಲು ಇಚ್ಛೆ ಇರುವುದಿಲ್ಲ ಎಂಬ ತನ್ನ ತೀರ್ಮಾನವನ್ನು ರಹಸ್ಯವಾಗಿ ಮತ ಚಲಾಯಿಸುವ ಮೂಲಕ ವ್ಯಕ್ತಪಡಿಸಲು ಅನುಕೂಲವಾಗುವಂತೆ ಮತಪತ್ರದಲ್ಲಿ ಕೊನೆಯ ಅಭ್ಯರ್ಥಿಯ ನಂತರದ ಪ್ಯಾನಲ್ನಲ್ಲಿ ಮೇಲ್ಕಂಡ ಯಾರೂ ಅಲ್ಲ ಎಂದು ಮುದ್ರಿಸಲಾಗಿರುತ್ತದೆ.

ಭಾವಚಿತ್ರವಿರುವ ಮತಪತ್ರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದೇ ವಾರ್ಡಿನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವುದರಿಂದ, ಅಭ್ಯರ್ಥಿಗಳನ್ನು ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ಅವರ ವೃತ್ತಿ ಅಥವಾ ವಿಳಾಸ ಇತ್ಯಾದಿಗಳನ್ನು ತೋರಿಸಲಾಗುತ್ತಿತ್ತು. ಆದರೂ ಸಹ ಮತದಾರನಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸಲು ಕ್ರಮ ಕೈಗೊಳ್ಳಲಾಗಿದೆ.

ಘೋಷಣಾ ಪತ್ರ/ ಪ್ರಮಾಣಪತ್ರ: ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ, ತನ್ನ ಹಿನ್ನಲೆ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳು, ತನ್ನ ಸ್ವ-ವಿವರ, ವಿದ್ಯಾರ್ಹತೆ ಆದಾಯದ ಮೂಲಗಳನ್ನು ಪರಿಷ್ಕೃತ ನಮೂನೆಯಲ್ಲಿ ಘೋಷಣಾ ಪತ್ರ/ ಪ್ರಮಾಣ ಪತ್ರ (ಅಪಿಡವಿಟ್) ಸಲ್ಲಿಸಬೇಕಾಗಿರುತ್ತದೆ.

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಬಂದೋಬಸ್ತ್ ಹಾಗೂ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳಲು ಜಿಲ್ಲಾ ಪೊಲೀಸ್‌ ಇಲಾಖೆ ಸಹಕಾರ ಪಡೆಯಲಾಗಿದೆ. ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಕೋರಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ ಇದ್ದರು.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷರಹಿತ
ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷರಹಿತವಾಗಿರುತ್ತವೆ. ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿಯೂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ ಸಭೆ, ಸಮಾರಂಭಗಳನ್ನು ನಡೆಸುವ, ಸ್ಥಳೀಯ ರಾಜಕೀಯ ಮುಖಂಡರುಗಳ ಭಾವಚಿತ್ರಗಳನ್ನು ಕರಪತ್ರಗಳಲ್ಲಿ ಮುದ್ರಿಸಿ ಪಕ್ಷಗಳ ಬಾವುಟ ಮತ್ತು ಚಿಹ್ನೆಗಳನ್ನು ಬಳಸಿಕೊಂಡು ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆದಿನ
ಮೇ 9ರಂದು ಶಹಾಪುರ ನಗರಸಭೆಗೆ ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ಮೇ 13ರಂದು ತಾಲೂಕು/ ಗ್ರಾಮ ಪಂಚಾಯಿತಿ ಕ್ಷೇತ್ರಗಳ ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು. ಮೇ 16 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕೊನೆ ದಿನವಾಗಿದ್ದು, ಮೇ 29ರಂದು ಬೆಳಗ್ಗೆ 7ರಿಂದ ಸಂಜೆ 5:00 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಮೇ 30ರಂದು ನಡೆಸಲಾಗುವುದು. ಮೇ 31ರಂದು ಬೆಳಗ್ಗೆ 8:00 ಗಂಟೆಯಿಂದ ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ಮತ ಎಣಿಕೆ ಜರುಗಲಿದೆ. ಚುನಾವಣಾ ಪ್ರಕ್ರಿಯೆ ಮೇ 31ರೊಳಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next