ಯಾದಗಿರಿ: ಯಾದಗಿರಿ ಜಿಲ್ಲಾ ಕೇಂದ್ರವಾಗಿ ದಶಕವಾದರೂ ಇಲ್ಲಿನ ನಗರಸಭೆಗೆ ಸುವ್ಯವಸ್ಥಿತ ಕಟ್ಟಡ ಇಲ್ಲ. ಇಕಟ್ಟಿನ ಸ್ಥಳ ಮತ್ತು ಕಟ್ಟಡದಲ್ಲೇ ನಗರಸಭೆ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಜನಪ್ರತಿನಿಧಿಗಳು ಸೇರಿ ಯಾರೊಬ್ಬರೂ ಇತ್ತ ಗಮನಹರಿಸದಿರುವುದು ವಿಪರ್ಯಾಸವಾಗಿದೆ.
ಸದ್ಯ ನಗರಸಭೆ ಕಟ್ಟಡದಲ್ಲಿ ಕೇವಲ 6-7 ಕೋಣೆಗಳಿದ್ದು, ಇಕ್ಕಟ್ಟಿನ ಸ್ಥಳದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಪೂರ್ಣ ನಗರದ ಭೂ ದಾಖಲೆಗಳು, ನೀರು, ಇನ್ನಿತರ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ನಗರಸಭೆಯಲ್ಲೇ ಇರುತ್ತವೆ. ಆದರೆ ಈಗಿನ ನಗರಸಭೆ ಕಟ್ಟಡ ಎಷ್ಟು ಸುರಕ್ಷಿತ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಕಾರ್ಯಾಲಯಕ್ಕೆ ಸಂಪೂರ್ಣ ಸಿಸಿ ಕ್ಯಾಮೆರಾಗಳ ಕಣ್ಗಾವಲೇನೋ ಇದೆ. ಆದರೆ ಸಿಬ್ಬಂದಿಗೆ ಕಾರ್ಯ ನಿರ್ವಹಿಸಲು ಸಮರ್ಪಕ ಸ್ಥಳಾವಕಾಶವೇ ಇಲ್ಲ. ಕಂಪ್ಯೂಟರ್, ಅಲಮಾರಿ ಸೇರಿ ಉಪಕರಣಗಳಿಂದಲೇ ಕೋಣೆಗಳು ತುಂಬಿ ಹೋಗಿವೆ. ಇದರಿಂದ ಕಚೇರಿಗೆ ಆಗಮಿಸುವ ಸಾರ್ವಜನಿಕರು, ಸಿಬ್ಬಂದಿ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ರಾಜ್ಯ ಬಜೆಟ್‌ಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನಡೆಸಿದ ಸಭೆಯಲ್ಲಿ ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ 7 ಕೋಟಿ ರೂ. ಮತ್ತು ಒಳಚರಂಡಿ ಕಾಮಗಾರಿಗೆ 87 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಈ ಮಧ್ಯೆ ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಗರೋತ್ಥಾನ ಯೋಜನೆಯ ಎರಡು ಕಾಮಗಾರಿಗಳನ್ನು ಬದಲಾಯಿಸಿ, ಸದ್ಯ ಇರುವ ಸ್ಥಳದಲ್ಲಿಯೇ ನಗರಸಭೆ ಕಟ್ಟಡ ಮರು ನಿರ್ಮಾಣಕ್ಕೆ ಸುಮಾರು 1.10ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಗರಾಭಿವೃದ್ಧಿ ಸಚಿವರು ಜಿಲ್ಲೆಗೆ ಭೇಟಿ ನೀಡುತ್ತಿದ್ದು ನಗರಸಭೆಯತ್ತ ಒಂದು ನಜರ್ ಹರಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಅನುಮೋದನೆ ನೀಡಬೇಕಿದೆ.
ಗಡಿ ಜಿಲ್ಲೆಯಲ್ಲಿ ಪ್ರಭಾರಿಗಳ ಕಾರುಬಾರು ! : ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಪ್ರಭಾರಿ ಅಧಿಕಾರಿಗಳದ್ದೇ ಕಾರುಬಾರು ನಡೆದಿದೆ. ಇದಕ್ಕೆ ನಗರಾಭಿವೃದ್ಧಿ ಇಲಾಖೆಯೂ ಹೊರತಾಗಿಲ್ಲ. ಜಿಲ್ಲಾ ನಗರಾಭಿವೃದ್ಧಿ ಕೋಶ ಅಧಿಕಾರಿ ಇಲ್ಲದೇ ಅನಾಥವಾಗಿದ್ದು ಇದರ ಹೆಚ್ಚುವರಿ ಹೊಣೆಯನ್ನು ಅಪರ ಜಿಲ್ಲಾ ಧಿಕಾರಿಗೆ ವಹಿಸಲಾಗಿದೆ. ಇನ್ನು ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಪೌರಾಯುಕ್ತರ ವರ್ಗಾವಣೆ ಬಳಿಕ ಕುರ್ಚಿ ಖಾಲಿಯಾಗಿದ್ದು ಪ್ರಭಾರಿ ಅಧಿ ಕಾರಿಯನ್ನು ನೇಮಿಸಲಾಗಿದೆ. ಅಲ್ಲದೇ ಗುರುಮಠಕಲ್ ಪುರಸಭೆ ಮತ್ತು ಸುರಪುರ ನಗರಸಭೆಗೆ ಒಬ್ಬರೇ ಅಧಿಕಾರಿಯಿದ್ದು ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ?. ಸರ್ಕಾರ ಜಿಲ್ಲೆಗೆ ಸೂಕ್ತ ಅಧಿಕಾರಿಗಳನ್ನು ನೇಮಿಸಲು ಮುಂದಾಗಬೇಕಿದೆ.
–ಅನೀಲ ಬಸೂದೆ