Advertisement

ಕೇಂದ್ರದಿಂದ ಯಾದಗಿರಿಗೆ ಬಂಪರ್‌ ಕೊಡುಗೆ

11:58 AM Oct 26, 2019 | |

ಅನೀಲ ಬಸೂದೆ
ಯಾದಗಿರಿ: ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾಗಿದ್ದ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಕೊನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಜಿಲ್ಲೆಗೆ ಮೋದಿ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ಆರೋಗ್ಯದ ಹಿತದೃಷ್ಟಿಯಿಂದ ಸಾಕಷ್ಟು ಅನುಕೂಲಗಳಾಗಲಿದೆ.

Advertisement

ಅ. 23ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಚಿಕ್ಕಮಗಳೂರು, ಹಾವೇರಿ ಹಾಗೂ ಯಾದಗಿರಿ ಜಿಲ್ಲೆಗೆ ನೂತನ ಮೆಡಿಕಲ್‌ ಕಾಲೇಜು ಸ್ಥಾಪಿಸುವ ಸಂಬಂಧ ಅನುಮೋದನೆ ನೀಡಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಗೆ ಪತ್ರ ರವಾನಿಸಿದೆ.

ಮೆಡಿಕಲ್‌ ಕಾಲೇಜು ಸ್ಥಾಪನೆಗೆ ತಲಾ 325 ಕೋಟಿ ರೂ. ಅನುಮೋದನೆ ದೊರೆತಿದ್ದು, ಶೇ. 60ರಷ್ಟು ಅಂದರೆ 195 ಕೋಟಿ ರೂ. ಕೇಂದ್ರ ಸರ್ಕಾರ ಭರಿಸಲಿದ್ದು, ಉಳಿದ ಶೇ. 40ರಷ್ಟು ಅಂದರೆ 130 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಖರ್ಚು ಮಾಡಬೇಕಿದೆ.

ಹಿಂದುಳಿದ ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಆರಂಭಿಸುವುದರಿಂದ ಈ ಭಾಗದ ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಜೊತೆಗೆ ವ್ಯಾಪಾರ ವಹಿವಾಟು ಹೆಚ್ಚಳಕ್ಕೂ ಸಹಕಾರಿಯಾಗಲಿದ್ದು, ಕಾಲೇಜಿನಲ್ಲಿ ಅನ್ಯ ರಾಜ್ಯ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದರಿಂದ ಜಿಲ್ಲೆಯ ಒಟ್ಟಾರೆ ಆರ್ಥಿಕತೆಯ ಅಭಿವೃದ್ಧಿಗೂ ಪುಷ್ಟಿ ನೀಡಲಿದೆ.

ಈ ಹಿಂದೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜೂ.21ರಂದು ಗ್ರಾಮ ವಾಸ್ತವ್ಯಕ್ಕೆ ಚಂಡರಕಿಗೆ ಬಂದ ವೇಳೆ ಮೆಡಿಕಲ್‌
ಕಾಲೇಜು ಅವಶ್ಯಕತೆಯಿಲ್ಲ ಎನ್ನುವ ಮಾತನಾಡಿದ್ದು, ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಎಚ್‌ಡಿಕೆ ಹೇಳಿಕೆ ಖಂಡಿಸಿ ಆಗಿನ ವಿರೋಧ ಪಕ್ಷವಾಗಿದ್ದ ಬಿಜೆಪಿ ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆಯೂ ನಡೆದಿತ್ತು.

Advertisement

ಅ. 5ರಂದು ಈಗಿನ ಬಿಜೆಪಿ ಸರ್ಕಾರದ ಸಿಎಂ ಯಡಿಯೂರಪ್ಪ ಭೇಟಿ ವೇಳೆ ಸ್ಥಳೀಯ ಶಾಸಕರು ಮೆಡಿಕಲ್‌ ಕಾಲೇಜು ಅಗತ್ಯತೆ ಬಗ್ಗೆ ಗಮನ ಸೆಳೆದಿದ್ದರು. ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಹಿಂದುಳಿದ ಜಿಲ್ಲೆಗೆ ಆದ್ಯತೆಯಾಗಿ ಬರುವ ಬಜೆಟ್‌ನಲ್ಲಿ ಮೆಡಿಕಲ್‌ ಕಾಲೇಜು ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದರು.

ಅಲ್ಲದೇ ಎಲ್ಲ ಮುಂದುವರಿದ ಜಿಲ್ಲೆಗಳಂತೆ ಅಗತ್ಯ ಮೂಲ ಸೌಕರ್ಯ ನೀಡಿ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎನ್ನುವ ಭರವಸೆಯ ಮಾತುಗಳನ್ನಾಡಿದ್ದರು. ಯಾದಗಿರಿ ಮೇಲೆ ಕಾಳಜಿ ಹೊಂದಿರುವ ಯಡಿಯೂರಪ್ಪ 2009ರಲ್ಲಿ ತಾವು ಸಿಎಂ ಇರುವ ವೇಳೆ ಜಿಲ್ಲೆಯಾಗಿ ಘೋಷಿಸಿದ್ದನ್ನು ಸ್ಮರಿಸಬಹುದು.

ರಾಜ್ಯ ಬಜೆಟ್‌ನಲ್ಲಿ ಅನುದಾನ?: ಯಾದಗಿರಿಗೆ ಭೇಟಿ ನೀಡಿದ ವೇಳೆ ಬರುವ ಬಜೆಟ್‌ನಲ್ಲಿ ಕಡ್ಡಾಯವಾಗಿ ಯಾದಗಿರಿಗೆ ಮೆಡಿಕಲ್‌ ಕಾಲೇಜು ಘೋಷಣೆ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಮಾತು ಬಜೆಟ್‌ಗೂ ಮುನ್ನವೇ ಈಡೇರಿದೆ. ಸದ್ಯ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಅನುದಾನ ಬಿಡುಗಡೆಗೊಳಿಸುವ ಕಾರ್ಯ ರಾಜ್ಯ ಬಜೆಟ್‌ನಲ್ಲಿ ಕೈಗೂಡುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next