Advertisement

ಮೈಲಾರಲಿಂಗೇಶ್ವರ ಜಾತ್ರೆ ಸಿದ್ಧತೆಗೆ ಸೂಚನೆ

03:13 PM Dec 05, 2019 | Team Udayavani |

ಯಾದಗಿರಿ: ಮೈಲಾಪುರದ್ಲಿ ಜನವರಿಯಲ್ಲಿ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಕುಡಿಯುವ ನೀರು, ಭಕ್ತರಿಗೆ ಸ್ನಾನದ ವ್ಯವಸ್ಥೆ ಹಾಗೂ ಸಾರಿಗೆ ಸೌಲಭ್ಯ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಲಾರಲಿಂಗೇಶ್ವರ ಜಾತ್ರೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರಾ ಮಹೋತ್ಸವಕ್ಕೆ ಇನ್ನು ಒಂದೂವರೆ ತಿಂಗಳು ಬಾಕಿ ಇದೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಈಗಿನಿಂದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಗ್ರಾಮದ ರಸ್ತೆಗಳ ವಿಸ್ತರಣೆ, ದುರಸ್ತಿ ಮಾಡಲು ಕ್ರಮವಹಿಸಬೇಕು. ಜಾತ್ರೆ ಸಂದರ್ಭದಲ್ಲಿ ವಾಹನ ದಟ್ಟಣೆಯಾಗಿ ಭಕ್ತರಿಗೆ ಓಡಾಡಲು ಸಮಸ್ಯೆಯಾಗಬಹುದು. ಹಾಗಾಗಿ ಏಕಮುಖ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗಬಾರದು. ಬೇರೆ ರಾಜ್ಯಗಳಿಂದ ಹೆಚ್ಚಿನ ಭಕ್ತರು ಬರುವ ಹಿನ್ನೆಲೆಯಲ್ಲಿ ಯಾದಗಿರಿ ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿ ಪೊಲೀಸ್‌ ಭದ್ರತೆ ಒದಗಿಸಬೇಕು ಎಂದು ಸೂಚಿಸಿದರು.

ಜಾತ್ರೆಯಲ್ಲಿ ಭಕ್ತರ ಹಿತಾಸಕ್ತಿ ಕಾಪಾಡಲು ಸ್ಥಳೀಯ ಸ್ವಯಂ ಸೇವಕರನ್ನು ನೇಮಿಸಬೇಕು. ಮೈಲಾಪುರದ ಇಡೀ ನಕ್ಷೆ ತಯಾರಿಸಿ ಅಂಗಡಿ-ಮುಂಗಟ್ಟು, ಬಸ್‌ ನಿಲ್ದಾಣ, ವಸ್ತು ಪ್ರದರ್ಶನ, ಚೆಕ್‌ಪೋಸ್ಟ್‌, ತೆಂಗಿನಕಾಯಿ ಒಡೆಯುವ ಸ್ಥಳ ಮುಂತಾದವುಗಳನ್ನು ಈಗಲೇ ಗುರುತಿಸಬೇಕು. ಸಂಬಂಧಿಸಿದ ಇಲಾಖೆ ಎಲ್ಲ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದರು.

ಕುರಿಮರಿ ಹಾರಿಸಿದರೆ ಕ್ರಿಮಿನಲ್‌ ಮೊಕದ್ದಮೆ: ಜಾತ್ರೆಯಲ್ಲಿ ಕುರಿಮರಿ ಹಾರಿಸುವ ವಾಡಿಕೆ ಇದೆ. ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960ರಂತೆ ಕುರಿಮರಿ ಹಾರಿಸುವುದನ್ನು ತಡೆಗಟ್ಟಲು ಹಾಗೂ ಕಣ್ತಪ್ಪಿಸಿ ಕುರಿಮರಿಗಳನ್ನು ಹಾರಿಸುವವರ ವಿರುದ್ಧ ಪೊಲೀಸ್‌ ಇಲಾಖೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಳೆದ ಬಾರಿಯಂತೆ ದ್ರೋಣ್‌ ಕ್ಯಾಮೆರಾಗಳ ಮೂಲಕ ಎಲ್ಲ ಕಾರ್ಯಕ್ರಮಗಳ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರಮುಖವಾಗಿ ಕುರಿಮರಿಗಳನ್ನು ಹಾರಿಸುವ ಚಟುವಟಿಕೆಯಲ್ಲಿ ತೊಡಗಿರುವುದು ಯಾರಾದರೂ ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಕುರಿಮರಿಗಳ ಹಾರಾಟ ತಪ್ಪಿಸಲು ಮೈಲಾಪುರದ ಸುತ್ತಮುತ್ತ ಒಟ್ಟು 6 ಚೆಕ್‌ಪೋಸ್ಟ್‌ ಸ್ಥಾಪಿಸಬೇಕು. ಇವುಗಳಲ್ಲಿ ಪೊಲೀಸ್‌, ಕಂದಾಯ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ನಿರ್ದೇಶಿಸಿದರು.

Advertisement

ಮೈಲಾರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಪಂ ಸದಸ್ಯರು ಹಾಜರಿದ್ದು, ಜಾತ್ರಾ ಮಹೋತ್ಸವ ಯಶಸ್ವಿಗೆ ಸಲಹೆ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಡಿವೈಎಸ್‌ಪಿ ಯು. ಶರಣಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ಅಬಕಾರಿ ಇಲಾಖೆ ಜಿಲ್ಲಾ ವಿಚಕ್ಷಣ ದಳದ ನಿರೀಕ್ಷಕ ಕೇದಾರನಾಥ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಸಂಚಾಲನಾ ಅಧಿಕಾರಿ ಮಹಿಪಾಲ ಬೇಗಾರ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next