Advertisement

ಗುರುಮಠಕಲ್‌ನಲ್ಲಿ ಜೆಡಿಎಸ್‌ ನಡೆ ಇನ್ನೂ ನಿಗೂಢ

10:20 AM Apr 19, 2019 | Naveen |

ಯಾದಗಿರಿ: ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಗುರುಮಠಕಲ್‌ ಈಗ ಜೆಡಿಎಸ್‌ ವಶದಲ್ಲಿದ್ದು, ಮೈತ್ರಿ ಅಭ್ಯರ್ಥಿಗೆ ಬೆಂಬಲಿಸುವ ವಿಚಾರ ಇಲ್ಲಿ ಇನ್ನೂ ನಿಗೂಢವಾಗಿಯೇ ಉಳಿದಿದೆ. ರಾಜ್ಯ ರಾಜಕಾರಣದಲ್ಲಿ ಹೈವೋಲ್ಟೇಜ್‌ ಸ್ಪರ್ಧೆ ಏರ್ಪಟ್ಟಿರುವ ಕಲಬುರಗಿ ಲೋಕಸಭೆ ಕ್ಷೇತ್ರದ ಗುರುಮಠಕಲ್‌ ವಿಧಾನಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಭಾಗಿಯಾಗದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ಬದ್ಧ ವೈರಿ ಡಾ| ಖರ್ಗೆ ಅವರಿಗೆ ಬೆಂಬಲ ನೀಡುವರೇ
ಅಥವಾ ಇಲ್ಲವೇ ಎನ್ನುವುದು ಪ್ರಶ್ನೆಯಾಗಿಯೇ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಕಾಡುತ್ತಿದೆ.

Advertisement

ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಮನವೊಲಿಸಿಲು ಈಗಾಗಲೇ ರಾಯಚೂರು ಲೋಕಸಭೆ ಕ್ಷೇತ್ರ ಅಭ್ಯರ್ಥಿ ಬಿ.ವಿ. ನಾಯಕ ಅಲ್ಲದೇ ಸ್ವತಃ ಡಾ| ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆ
ಶಾಶಕರ ಮನೆಗೆ ಭೇಟಿ ನೀಡಿ ರಹಸ್ಯ ಮಾತುಕತೆ ನಡೆಸಿದ್ದರೂ ಮಾತುಕತೆ ಫಲಕಾರಿಯಾಗಿಲ್ಲ ಎನ್ನಲಾಗಿದೆ.

ಕಾಂಗ್ರೆಸ್‌ ಒಂದು ಕಡೆಯಿಂದ ಗುರುಮಠಕಲ್‌ ಶಾಸಕರ ಮನವೊಲಿಸುವ ಪ್ರಯತ್ನವೂ ಮಾಡಿ ಇನ್ನೊಂದೆಡೆ ಮೈತ್ರಿ ಧರ್ಮವನ್ನು ಪಾಲಿಸಿ ಪ್ರಚಾರ ಸಭೆಯಲ್ಲಿ ನಾಗನಗೌಡ ಕಂದಕೂರ ಅವರ ಭಾವಚಿತ್ರವನ್ನು ಬ್ಯಾನರ್‌ಗಳಲ್ಲಿ ಹಾಕುತ್ತಿದ್ದು,
ಕಂದಕೂರ ಮಾತ್ರ ಪ್ರಚಾರದಲ್ಲಿ ಕಂಡಿಲ್ಲ.

ಜೆಡಿಎಸ್‌ ಹೈಕಮಾಂಡ್‌ ಮಾತಿನಂತೆ ಶಾಸಕರು ಬೆಂಬಲಕ್ಕೆ ಒಪ್ಪಿದ್ದಾರೆ. ಆದರೆ, ಡಾ| ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಚಾರಕ್ಕೆ ಆಮಂತ್ರಿಸುವಂತೆ ಶಾಸಕ ಕಂದಕೂರ ಬೇಡಿಕೆ ಇಟ್ಟಿದ್ದಾರೆ ಎಂದು
ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಒಂದು ವಾರದ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್‌ ಕಂದಕೂರ ಅವರ ಮನೆಗೆ ಭೇಟಿ ನೀಡಿದ್ದರು ಎಂಬುದು
ಇಲ್ಲಿ ಗಮನಾರ್ಹ ಸಂಗತಿ. ಕುತೂಹಲ ಕೆರಳಿಸಿದ್ದ ಶರಣಗೌಡ ವಾಟ್ಸ್‌ ಆ್ಯಪ್‌ ಸಂದೇಶ: ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಜೆಡಿಎಸ್‌ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಕಾರ್ಯಕರ್ತರ ವಾಟ್ಸ್‌ಆ್ಯಪ್‌ ಗ್ರುಪ್‌
ಗೆ ಸಂದೇಶವೊಂದನ್ನು ಕಳುಹಿಸಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಬೇಕೆ ಇಲ್ಲವೇ ಎನ್ನುವ ವಿಚಾರವಾಗಿ ಏ.18ರಂದು ಸಂಜೆ ಕಾರ್ಯಕರ್ತರಿಗೆ ತಿಳಿಸಲಾಗುವುದು ಎಂದು
ಸಂದೇಶವೊಂದನ್ನು ಕಳುಹಿಸಿದ್ದರು. ಆದರೆ, ಸಂಜೆ 7:30 ಗಂಟೆಯಾದರೂ ಕಾರ್ಯಕರ್ತರಿಗೆ ಯಾವುದೇ ವಿಷಯವನ್ನು ತಿಳಿಸದಿರುವುದು ತಿಳಿದು ಬಂದಿದೆ.

ಕಂದಕೂರ ಪತ್ರಿಕಾಗೋಷ್ಠಿ ಸಾಧ್ಯತೆ: ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಅವರು ಗುರುಮಠಕಲ್‌ನಲ್ಲಿ
ಡಾ| ಖರ್ಗೆ ಅವರನ್ನು ಬೆಂಬಲಿಸುವುದೋ ಅಥವಾ ಇಲ್ಲವೋ ಎನ್ನುವ ವಿಚಾರವಾಗಿ ಏ. 19ರಂದು ಪತ್ರಿಕಾಗೋಷ್ಠಿ ಕರೆಯುವ
ಸಾಧ್ಯತೆ ದಟ್ಟವಾಗಿದೆ. ಲೋಕಸಭೆ ಚುನಾವಣೆ ಕಾವೇರುತ್ತಿದ್ದಂತೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಸ್ವತಃ ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಪತ್ರಿಕಾಗೋಷ್ಠಿ ಕರೆದು ವಿಷಯ ಬಹಿರಂಗ ಪಡಿಸಿದ ಬಳಿಕವೇ ಬೆಂಬಲದ ವಿಚಾರ ಸ್ಪಷ್ಟವಾಗಲಿದೆ.

Advertisement

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಗುರುಮಠಕಲ್‌ನಲ್ಲಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುವ ವಿಚಾರವಾಗಿ ಕೆಲದಿನಗಳ ಹಿಂದೆಯಷ್ಟೇ ಜೆಡಿಎಸ್‌ ಪ್ರಮುಖ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಬಹುತೇಕ ಕಾರ್ಯಕರ್ತರು
ಕಾಂಗ್ರೆಸ್‌ನ್ನು ಬೆಂಬಲಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next