ಯಾದಗಿರಿ: ಜಿಲ್ಲಾದ್ಯಂತ ಕುಷ್ಠರೋಗ ಮತ್ತು ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ನ. 25ರಿಂದ ಡಿಸೆಂಬರ್ 10ರ ವರೆಗೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನಸಂಖ್ಯೆ 14,15,552 ಇದೆ. ಒಟ್ಟು 2,32,605 ಮನೆಗಳಿವೆ. ಕುಷ್ಠ ಮತ್ತು ಕ್ಷಯರೋಗ ಪತ್ತೆಗೆ ಒಟ್ಟು 847 ತಂಡ ರಚಿಸಲಾಗಿದೆ. ಒಂದು ತಂಡದಲ್ಲಿ ಓರ್ವ ಆಶಾ ಕಾರ್ಯಕರ್ತೆ ಮತ್ತು ಒಬ್ಬ ಪುರುಷ ವಾಲೆಂಟೀರ್ ಇರುತ್ತಾರೆ. ಐದು ತಂಡಗಳಿಗೆ ಒಬ್ಬರಂತೆ 168 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಂದೋಲನದಲ್ಲಿ ಪ್ರತಿಯೊಂದು ತಂಡ ದಿನಕ್ಕೆ 20 ಮನೆಗಳಿಗೆ ಭೇಟಿ ನೀಡುತ್ತದೆ. ಕುಟುಂಬದ ಎಲ್ಲ ಸದಸ್ಯರ ದೇಹದ ಯಾವುದೇ ಭಾಗದಲ್ಲಿ ಮಚ್ಚೆ ಇದೆ ಅಥವಾ ಇಲ್ಲ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ. ಮಹಿಳೆಯರಿಗೆ ಆಶಾ ಕಾರ್ಯಕರ್ತೆ, ಪುರುಷರಿಗೆ ಪುರುಷ ವಾಲೆಂಟೀರ್ ತಪಾಸಣೆ ಮಾಡಲಿದ್ದು, ಅವರಿಗೆ ತರಬೇತಿ ನೀಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಮನೆಗೆ ಭೇಟಿ ನೀಡಿದಾಗ ಅವರಿಗೆ ಸ್ಪಂದಿಸುವ ಮೂಲಕ ಜಿಲ್ಲೆಯನ್ನು ಕುಷ್ಠ ಮತ್ತು ಕ್ಷಯರೋಗ ಮುಕ್ತಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ.ಎಸ್.ಪಾಟೀಲ ಮಾತನಾಡಿ, ನ. 25ರಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಯಾದಗಿರಿ ನಗರದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಹುವಿಧ ಔಷಧಿ ಚಿಕಿತ್ಸೆಯಿಂದ ಕುಷ್ಠರೋಗ ಗುಣಪಡಿಸಬಹುದಾಗಿದೆ. ಭಯ ಪಡುವ ಅಗತ್ಯವಿಲ್ಲ. ಚಿಕಿತ್ಸೆ ಅವಧಿ 6ರಿಂದ 12 ತಿಂಗಳು. ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ದೊರೆಯುತ್ತದೆ. ಪ್ರತಿ ಕ್ಷಯರೋಗಿಗೆ ಪೌಷ್ಟಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಯೋಜನೆ ಅಡಿ ಮಾಸಿಕ 500 ರೂ. ಗೌರವಧನವನ್ನು ಪೂರ್ಣ ಚಿಕಿತ್ಸೆ ಆಗುವವರೆಗೂ ನೀಡಲಾಗುವುದು. ಕ್ಷಯರೋಗಿಯ ಅಧಿಸೂಚನೆ ಮಾಡಿದ ಮಾಹಿತಿದಾರರಿಗೆ 500 ರೂ. ಗೌರವಧನ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ| ಗುರುರಾಜ ಹಿರೇಗೌಡ್ರು ಮಾತನಾಡಿ, ಎರಡು ವಾರ ಅಥವಾ ಹೆಚ್ಚಿನ ಅವಧಿಕೆಮ್ಮು, ಕೆಲವು ವೇಳೆ ಕಫದ ಜತೆಗೆ ರಕ್ತ ಕಾಣಿಸುವುದು, ಜ್ವರ ವಿಶೇಷವಾಗಿ ರಾತ್ರಿ ವೇಳೆ ಬರುವುದು, ತೂಕ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಈ ಲಕ್ಷಣಗಳಿರುವ ಜನರ ಕಫ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಆಂದೋಲನದ ಅಂಗವಾಗಿ ಕುಷ್ಠರೋಗ ಮತ್ತು ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್.ಬಿ. ಪಾಟೀಲ, ಆರೋಗ್ಯ ಇಲಾಖೆ ಸಹಾಯಕ ಆಡಳಿತ ಅಧಿಕಾರಿ ತಿಮ್ಮಯ್ಯ, ಡಿಎಚ್‌ಒ ಕಚೇರಿ ಅಧೀಕ್ಷಕ ಸಾಹೇಬಗೌಡ ಮಾನೇಗಾರ, ಹಿರಿಯ ಆರೋಗ್ಯ ಸಹಾಯಕ ಶರಣಬಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು.