ಯಾದಗಿರಿ: ಯಾದಗಿರಿ ತಾಲೂಕಿನ ಯಾದಗಿರಿ ದೊಡ್ಡ ಕೆರೆ ಹಾಗೂ ಯರಗೋಳ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ ಬುಧವಾರ ಭೇಟಿ ನೀಡಿ ವೀಕ್ಷಿಸಿದರು.
ಯಾದಗಿರಿ ದೊಡ್ಡಕೆರೆ ವೀಕ್ಷಿಸಿದ ಬಳಿಕ ಯರಗೋಳ ಗ್ರಾಮದಲ್ಲಿ ಭಾರತೀಯ ಜೈನ್ ಸಂಘಟನೆ ವತಿಯಿಂದ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ, ಈ ಸಂದರ್ಭದಲ್ಲಿ ರೈತರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಕೇಂದ್ರದ ನೀತಿ ಆಯೋಗವು ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಜಿಲ್ಲೆಗಳೆಂದು ಆಯ್ಕೆ ಮಾಡಿದೆ. ಈ ಜಿಲ್ಲೆಗಳು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗಾಗಿ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸಲಾಗುತ್ತಿದೆ ಎಂದರು.
ಈ ನಿಟ್ಟಿನಲ್ಲಿ ರೈತರ ಪ್ರಗತಿ ಮತ್ತು ನೀರಿನ ಸಂರಕ್ಷಣೆಗಾಗಿ ಜಿಲ್ಲೆಯ ಕೆರೆಗಳ ಹೂಳೆತ್ತಲಾಗುತ್ತಿದೆ. ಭಾರತೀಯ ಜೈನ ಸಂಘಟನೆ ಮಷಿನ್‌ನಿಂದ ಹೂಳು ತೆಗೆದುಕೊಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಸಂಘಟನೆಗೆ ಡೀಸೆಲ್ ನೆರವು ನೀಡುತ್ತದೆ. ಮಷಿನ್‌ನಿಂದ ತೆಗೆದುಕೊಟ್ಟ ಕೆರೆಯ ಹೂಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಹೊಲಗಳಿಗೆ ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಅಲ್ಲದೇ ಯರಗೋಳ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ಈ ಸಂದರ್ಭದಲ್ಲಿ ಪರಿಶೀಲಿಸಿದರು.
ಬಳಿಕ ಯರಗೋಳ ಗ್ರಾಮದ ಅಂಗವಾಡಿ ಕೇಂದ್ರ-7ಕ್ಕೆ ಭೇಟಿ ನೀಡಿ, ಮಕ್ಕಳ ದಾಖಲಾತಿ, ರಿಜಿಸ್ಟರ್‌ಗಳ ನಿರ್ವಹಣೆ, ಮಕ್ಕಳ ತೂಕವನ್ನು ಪರಿಶೀಲಿಸಿದರು. ಅಂಗನವಾಡಿಯಲ್ಲಿ ದಾಖಲಾದ ಮಕ್ಕಳ ಮನೆಗೆ ಭೇಟಿ ನೀಡಿ, ಅಂಗನವಾಡಿಯಲ್ಲಿ ವಿತರಿಸುತ್ತಿರುವ ಪೌಷ್ಟಿಕ ಆಹಾರದ ಕುರಿತು ಮಕ್ಕಳ ತಾಯಂದಿರಿಂದ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪರಿಶೀಲಿಸಿದರು.
ಜಿಲ್ಲಾಕಾರಿ ಎಂ. ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್. ಮನ್ನಿಕೇರಿ, ತಹಶೀಲ್ದಾರ್ ಶಿವರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.