ಯಾದಗಿರಿ: ಜಿಲ್ಲೆಯೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿದೆ. ಪ್ರಚಾರದ ಕೊರತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳಗಳು ಕಣ್ಮರೆಯಾಗಿವೆ. ಜಿಲ್ಲೆಯೂ ಅತಿ ಹೆಚ್ಚು ಕೆರೆ ಹೊಂದಿ ನೀರಾವರಿ ವ್ಯವಸ್ಥೆಯಲ್ಲಿ ಸಮೃದ್ಧಿ ಹೊಂದಿದ್ದ ಜಿಲ್ಲೆಯಾಗಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದರು.
ಲುಂಬಿನಿ ವನದಲ್ಲಿ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಯಾದಗಿರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಹಾಪುರ, ಸುರಪುರ ಹಾಗೂ ಯಾದಗಿರಿ ಬೆಟ್ಟಗಳಲ್ಲಿರುವ ಕೋಟೆ ಕಟ್ಟಿ ಅನೇಕ ಮನೆತನಗಳ ಆಳ್ವಿಕೆ ನಡೆಸಿ, ಸಾಕಷ್ಟು ಸ್ಮಾರಕ ನಿರ್ಮಿಸಿರುವುದನ್ನು ಕಾಣುತ್ತೇವೆ ಎಂದರು.
ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಮಾತನಾಡಿ, ಯುವ ಜನತೆಯೂ ಪ್ರೇಕ್ಷಣೀಯ ಸ್ಥಳಗಳ ಮಹತ್ವ ಅರಿತು ಪ್ರಚಾರಗೊಳಿಸುವುದು ಮುಖ್ಯ. ಯಾದಗಿರಿ ಜಿಲ್ಲೆಯೂ ಸಾಕಷ್ಟು ಪ್ರೇಕ್ಷಣೀಯ ಸ್ಥಳ ಹೊಂದಿದ್ದು, ಅವುಗಳ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ ಎಂದು ತಿಳಿಸಿದರು. ಜಿಪಂ ಸಿಇಒ ಶಿಲ್ಪಾ ಶರ್ಮಾ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ದೇವಸ್ಥಾನಗಳು ಮತ್ತು ಫಾಲ್ಸ್‌ಗಳು ಮನರಂಜನೆ ಸ್ಥಳಗಳಾಗಿವೆ. ವಾರಾಂತ್ಯಕ್ಕೆ ಬೇರೆ ಜಿಲ್ಲೆಗೆ ತೆರಳುವ ಬದಲು
ಜಿಲ್ಲೆಯಲ್ಲಿರುವ ಸ್ಥಳಗಳಿಗೆ ಭೇಟಿ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಐತಿಹಾಸಿಕ ಸ್ಮಾರಕ ಕಡೆಗಣಿಸುತ್ತ ವಿದೇಶಿ ಸ್ಥಳಗಳಿಗೆ ಭೇಟಿ ನೀಡುತ್ತೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬಳಿಚಕ್ರ ಗುಹಾಂತರ ಚಿತ್ರಕಲೆ ಕುರಿತಾದ ಆದಿಮ ಚಿತ್ರಕಲೆ ಪುಸ್ತಕ ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ ಆರ್. ಬಿಡುಗಡೆ ಮಾಡಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಎಸ್. ಚಂಡ್ರಿಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಯಾದಗಿರಿ ತಹಶೀಲ್ದಾರ್ ಚನ್ನಪಲ್ಲಪ್ಪ ಘಂಟಿ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರಿ) ಶಾಲಂ ಹುಸೇನ್ ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು ಮತ್ತು ವಿದ್ಯಾರ್ಥಿಗಳು ಇದ್ದರು. ಇತಿಹಾಸ ಸಂಶೋಧಕ ಭಾಸ್ಕರರಾವ್ ಮುಡಬೂಳ, ಸಹಾಯಕ ಖಜಾನೆ ಅಧಿಕಾರಿ ಡಾ| ಮೋನಪ್ಪ ಶಿರವಾಳ ಉಪನ್ಯಾಸ ನೀಡಿದರು. ಗುರುಪ್ರಸಾದ ವೈದ್ಯ ಸ್ವಾಗತಿಸಿ,ನಿರೂಪಿಸಿದರು.