ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿರುವುದರಿಂದ ಶಾಸಕ ವೆಂಕಟರೆಡ್ಡಿ ಮುದ್ನಾಳ ರವಿವಾರ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹತ್ತಿಗೂಡೂರ ಸಮೀಪದ ಕೊಳ್ಳೂರು (ಎಂ) ಗ್ರಾಮದ ಸೇತುವೆಗೆ ಭೇಟಿ ನೀಡಿದ ಶಾಸಕರು ಅಲ್ಲಿನ ಸ್ಥಿತಿಗತಿ ಅವಲೋಕಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಸವಸಾಗರ ಜಲಾಶಯದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಶಹಾಪುರ ತಾಲೂಕಿನ ಮರಕಲ್, ಕೊಳ್ಳೂರು, ಡೊಣ್ಣೂರು, ಗೌಡೂರು ಗ್ರಾಮದ ಜಮೀನುಗಳಿಗೆ ನೀರು ನುಗ್ಗಲಿವೆ. ಅಲ್ಲದೇ ವಡಗೇರಾ ತಾಲೂಕಿನ ವ್ಯಾಪ್ತಿಯ ಹಯ್ನಾಳ (ಬಿ), ಅನಕಸೂಗೂರ, ತುಮಕೂರು, ಚನ್ನೂರು ಹಾಗೂ ಬೆಂಡೆಬೆಂಬಳ್ಳಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಯಾದಗಿರಿ ಶಾಸಕರು, ಮೊದಲಿಗೆ ಕೊಳ್ಳೂರು ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು. ಸೇತುವೆಯಲ್ಲಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಈಗಾಗಲೇ ರಸ್ತೆ ಸಂಪರ್ಕ ಸ್ಥಗಿತಗೊಳಿಸಲಾಗಿದ್ದು, ಹತ್ತಿಗೂಡೂರ ಮಾರ್ಗವಾಗಿ ದೇವದುರ್ಗ ತೆರಳುವ ರಸ್ತೆ ಬಂದ ಮಾಡಲಾಗಿದೆ. ಯಾದಗಿರಿಯಿಂದ ರಾಯಚೂರು ಜಿಲ್ಲೆಗೆ ಸಂಚಾರಕ್ಕೆ ತಿಂಥಿಣಿ ಸೇತುವೆ ಮೂಲಕ ವಾಹನಗಳು ಸಂಚರಿಸುತ್ತಿದ್ದು, ಸುಮಾರು 60 ಕಿ.ಮೀಟರ್ ಹೆಚ್ಚುವರಿ ಸುತ್ತುವರಿದು ಪ್ರಯಾಣಿಸಬೇಕಿದೆ.
ಸೇತುವೆ ಅಕ್ಕಪಕ್ಕದ ಗ್ರಾಮಸ್ಥರನ್ನು ಅಗತ್ಯ ಬಿದ್ದರೇ ಬೇರೆಕಡೆ ಸ್ಥಳಾಂತರಿಸಲೂ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸ್ಥಳದಲ್ಲಿಯೇ ಇದ್ದ ಶಹಾಪುರ ಹಾಗೂ ವಡಗೇರಾ ತಹಶೀಲ್ದಾರರಿಗೆ ಶಾಸಕರು ಸೂಚಿಸಿದರು. ಬಳಿಕ ಮರಕಲ್ ಗ್ರಾಮದ ಹೊಲಗಳಿಗೆ ಸೇತುವೆ ಪ್ರವಾಹ ನೀರು ನುಗ್ಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗೂಗಲ್ ಬ್ರಿಡ್ಜ್ಗೆ ಭೇಟಿ ನೀಡಿ ನೀರು ಹರಿಯುವ ಪ್ರಮಾಣವನ್ನು ವೀಕ್ಷಿಸಿ, ನಂತರ ತುಮಕೂರಿನಲ್ಲಿ ಮುಗುಳು ಭೀತಿ ಎದುರಿಸುತ್ತಿರುವ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಶಹಾಪುರ ತಹಶೀಲ್ದಾರ್ ಸಂಗಮೇಶ ಜಿಡಗೆ, ವಡಗೇರಾ ತಹಶೀಲ್ದಾರ್ ಸಂತೋಷ ರಾಣಿ, ಶಹಾಪುರ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಪಂಪಾಪತಿ ಹಿರೇಮಠ, ಕೆಬಿಜೆಎನ್ನೆಲ್ ಅಧಿಕಾರಿ ಚಂದ್ರಶೇಖರ ಮಾಗಾ, ಪ್ರಮುಖರಾದ ಶ್ರೀನಿವಾಸರೆಡ್ಡಿ ಚನ್ನೂರ, ಸಿದ್ದಣ್ಣಗೌಡ ಕಾಡಂಗೇರಾಠ, ಶರಣಗೌಡ ಕಾಳಬೆಳಗುಂದಿ, ರಮೇಶ ದೊಡ್ಡಮನಿ, ಚಂದ್ರಶೇಖರಗೌಡ ಮರಕಲ್, ರವೀಂದ್ರರೆಡ್ಡಿ ಡೊಣ್ಣೂರ, ಚನ್ನರೆಡ್ಡಿ ಮದರಕಲ್, ಅಂಬಣ್ಣಗೌಡ ಅನಕಸೂಗೂರ, ಹಣಮಂತ ಇಟಗಿ, ವೆಂಕಟರೆಡ್ಡಿ ಅಬ್ಬೆತುಮಕೂರು ಸೇರಿದಂತೆ ಹಲವರು ಇದ್ದರು.