ಯಾದಗಿರಿ: ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಮಲ್ಲು ಮಾಳಿಕೇರಿ ನೇತೃತ್ವದಲ್ಲಿ ಕೌಳೂರು ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಲಾಯಿತು.
ತಾಲೂಕಿನ ಕೌಳೂರು ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ, 3 ಕಿಲೋ ಮೀಟರ್ ದೂರದಿಂದ ನೀರು ತರುವ ಅನಿವಾರ್ಯತೆ ಎದುರಾಗಿದೆ. ಪಕ್ಕದಲ್ಲಿಯೇ ಭೀಮಾನದಿ ಹರಿದರೂ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದು, ಇದಕ್ಕೆ ಅಧಿಕಾರಿಗಳ ನಿಷ್ಕಾಳಜಿ ಎದ್ದು ಕಾಣುತ್ತದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸ್ಥಳೀಯ ನೀರಿನ ಮೂಲಗಳನ್ನು ಉಪಯೋಗಿಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್‌ನಿಂದ ಪ್ರಭಾವಿಗಳು ಅಕ್ರಮ ಸರಬರಾಜು ಪೈಪ್‌ಲೈನ್ ಅಳವಡಿಸಿಕೊಂಡಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಮೇಲಧಿಕಾರಿಗಳ ಸಮ್ಮುಖದಲ್ಲಿ ಗ್ರಾಪಂ ಪಿಡಿಒ ವಿರುದ್ಧ ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತ ಪಿಡಿಒ, ಕಾರ್ಯದರ್ಶಿ, ಪಂಪ್ ಆಪರೇಟರ್ ಹಾಗೂ ಸಿಬ್ಬಂದಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುತ್ತಾರೆ. ಸರ್ಕಾರಿ ಯೋಜನೆಗಳ ದುರುಪಯೋಗ ಪಡಿಸಿಕೊಳ್ಳುತ್ತಾ ಆರೋಪ ಪ್ರತ್ಯಾರೋಪದಲ್ಲಿ ಕಾಲ ಕಳೆಯುವ ಇವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಪರವಾಗಿ ಆಗಮಿಸಿದ ಎಡಿ ನರೇಗಾ ಚಂದ್ರಶೇಖರ ಪವಾರ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಸಾಹೇಬಗೌಡ ನಾಯಕ, ಸೈದಪ್ಪ ಗೌಡಗೇರಾ, ರಾಜು ಗೌಡಗೇರಾ, ವೆಂಕಟೇಶ ಕೌಳೂರು, ವೆಂಕಟರಡ್ಡಿ ಕೌಳೂರು, ಮಂಜು ರಾಂಪೂರಹಳ್ಳಿ, ಭೀಮಣ್ಣ ಶೆಟ್ಟಿಗೇರಾ, ಚಂದ್ರಾಮ ಗೌಡಗೇರಾ ಸೇರಿದಂತೆ ಗ್ರಾಮಸ್ಥರು, ಹಲವು ಕಾರ್ಯಕರ್ತರಿದ್ದರು.