Advertisement

ಅಸಾಧಾರಣ ಕೆಲಸ ಯುವಕರು-ಶಿಕ್ಷಕರಿಂದ ಸಾಧ್ಯ

05:32 PM Jan 25, 2020 | Naveen |

ಯಾದಗಿರಿ: ಯಾವುದೇ ಕ್ಷೇತ್ರದಲ್ಲಾಗಲಿ ಅಸಾಧಾರಣ ಕೆಲಸವಾಗಬೇಕಾದರೆ ಮೊದಲು ನಮ್ಮ ಯುವಕರು, ಶಿಕ್ಷಕರು ಹಾಗೂ ಮಠಾಧಿಪತಿಗಳಿಂದ ಮಾತ್ರ ಸಾಧ್ಯ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವಿಕಾಸ ಅಕಾಡೆಮಿ ಯಾದಗಿರಿ ಘಟಕದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಫೆ 15ರಂದು ಬೀದರ ಜಿಲ್ಲೆ ಬಸವಕಲ್ಯಾಣದ ಥೇರ ಮೈದಾನದಲ್ಲಿ ಕಲ್ಯಾಣ ಕರ್ನಾಟಕದ ಯುವ ಸಂಪತ್ತು 2020 ಯುವಕರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಯುವತಿಯರು ಹಾಗೂ ಸ್ತ್ರೀಶಕ್ತಿ ಸಂಘದ ಮಹಿಳೆಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪ್ರಸಕ್ತ ದಿನಗಳಲ್ಲಿ ಪದವಿ ಅಭ್ಯಾಸ ಮಾಡಿದ ಸಾವಿರಾರು ಯುವಕರು ಸರ್ಕಾರಿ ನೌಕರಿ ನಿರೀಕ್ಷೆಯಲ್ಲಿ ತಮ್ಮ ಅಮೂಲ್ಯ ಸಮಯ ಹಾಗೂ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಯುವ ಸಂಪತ್ತು ಈಗ ಕೆಟ್ಟ ವ್ಯಸನಗಳಿಗೆ ದಾಸರಾಗಿ ಬಲಿಯಾಗುತ್ತಿರುವುದು ದುರಂತ. ಯುವಪೀಳಿಗೆಗೆ ಸರಿಯಾದ ಮಾರ್ಗದರ್ಶನ ಹಾಗೂ ಆತ್ಮ ವಿಶ್ವಾಸ ತುಂಬುವುದು ಅವಶ್ಯಕವಾಗಿದೆ. ಸಮೃದ್ಧಿ ಬೆಳವಣಿಗೆಗೆ ಕೊನೆಯಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಸಾಕಷ್ಟು ಇದೆ. ಆದರೆ ಅದರ ಸದ್ಬಳಕೆ ಮಾಡಿಕೊಳ್ಳುವ ಬುದ್ಧಿವಂತಿಕೆ ನಮ್ಮ ಯುವಕರಿಗೆ ಬರಬೇಕಾಗಿದೆ ಎಂದು ಹೇಳಿದರು.

ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ವೇದಿಕೆ ಮತ್ತು ಪ್ರೇರಣೆಯಾಗಿ ಇಂತಹ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ 25 ಸಾವಿರ ಯುವಕರು ಮತ್ತು ಯುವತಿಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನಾವು ಆದರ್ಶದ ಮಾತಗಳನ್ನಾಡುವುದು ಸರಳ. ಆದರೆ, ಆದರ್ಶ ಬದುಕು ನಡೆಸುವುದು ದೀರ್ಘ‌ ತಪಸ್ಸಿನಿಂದ ಮಾತ್ರ ಸಾಧ್ಯ. ಉತ್ತಮ ಕರ್ಮಗಳ ಮೂಲಕ ಮಾತ್ರ ನಮ್ಮ ಭಾಗ ಪ್ರಗತಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಹಿಂದೆ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಎಂಬ ಹೆಸರಿನ ಜತೆಗೆ ಹಿಂದುಳಿದ ಭಾಗ ಎಂಬ
ಹಣೆಪಟ್ಟಿ ಇತ್ತು. ಆದರೆ ರಾಜ್ಯ ಸರ್ಕಾರ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರುವುದರಿಂದ ಇಲ್ಲಿರುವ ಶರಣರಿಗೆ ಗೌರವ ಸಲ್ಲಿಸುವ ಜತೆಗೆ ಕ್ಷೇತ್ರದ ಬದಲಾವಣೆಗೆ ಪೂರಕವಾಗಿ ಅಭಿವೃದ್ಧಿ ಕೆಲಸ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ಅಕಾಡೆಮಿ ಪ್ರಮುಖರಾದ ಶಾಂತರೆಡ್ಡಿ ವನಕೇರಿ, ಸೋಮಶೇಖರ ಮಣ್ಣೂರು, ಸಿದ್ಧಣಗೌಡ ಕಾಡಂನೋರ ವಡಗೇರಾ, ವೀರಣ್ಣ ರ್ಯಾಖಾ, ಆರ್‌. ಎಸ್‌. ಪಾಟೀಲ ಸಂಗವಾರ, ನರಸರೆಡ್ಡಿ ಗುರಮಿಠಕಲ್‌, ಸಿದ್ಧಲಿಂಗಪ್ಪ ಹರಸೂರ, ರಾಜಶೇಖರ ಪಾಟೀಲ ಕಿಲ್ಲನಕೇರಾ, ತಿಪ್ಪಾರೆಡ್ಡಿ ಮಾಧ್ವಾರ, ಮಹಾಲಕ್ಷ್ಮೀ ಪಾಟೀಲ, ನಿಜಗುಣಿ ಬಾಳಿ, ಖಾಸೀಂಸಾಬ್‌ ಗಡ್ಡೆಸೂಗುರ, ಸುಭಾಷರೆಡ್ಡಿ ಮದನಿ ಯಡ್ಡಳ್ಳಿ, ವೈಜನಾಥರೆಡ್ಡಿ ಹತ್ತಿಕುಣಿ, ವೀರಭದ್ರಪ್ಪಗೌಡ ಆಶನಾಳ, ಬುಗ್ಗಯ್ಯ ಕಲಾಲ, ಶರಣಪ್ಪಗೌಡ ರಾಮಸಮುದ್ರ, ಅಣ್ಣರಾಯ ಕೊಲ್ಲೂರ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next