ಯಾದಗಿರಿ: ಜಿಲ್ಲೆಯ ವಕ್ಫ್ ಇಲಾಖೆಯಲ್ಲಿ 2014ರಿಂದ 2018ರ ವರೆಗೆ ನಡೆದಿದೆ ಎನ್ನಲಾದ ಕೋಟ್ಯಂತರ ಅವ್ಯವಹಾರದ ಕುರಿತು ತನಿಖೆಗೆ ವಕ್ಫ್ ಬೋರ್ಡ್ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ವಕ್ಫ್ ಇಲಾಖೆಯಡಿ ದರ್ಗಾ, ಮಸೀದಿ, ಆಶ್ರುಖಾನಾ ಹಾಗೂ ಖಬರಸ್ಥಾನಕ್ಕೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಮಂಜೂರಾಗಿದ್ದ 767 ಲಕ್ಷ ರೂ.ಗಳಲ್ಲಿ ಕಾಮಗಾರಿ ಮಾಡದೇ ಅಧಿಕಾರಿಗಳು ಶಾಮೀಲಾಗಿ ಕೋಟ್ಯಂತರ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಹೋರಾಟಗಾರೊಬ್ಬರು ಸಂಗ್ರಹಿಸಿರುವ ದಾಖಲೆ ಪ್ರಕಾರ ಜಿಲ್ಲೆಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಲ್ಲಿ ಕೇವಲ 1.65 ಕೋಟಿ ರೂ. ವೆಚ್ಚದ 35 ಕಾಮಗಾರಿಗಳ ವಿವರ ಲಭ್ಯವಾಗಿದ್ದು, ಇದರಲ್ಲಿ ಬಹುತೇಕ ಕಾಮಗಾರಿಗಳನ್ನು ಆರಂಭಿಸದೆ ಇದ್ದರೂ ಕಾಮಗಾರಿ ಮುಗಿದಿದೆ ಎಂದು ಹಣ ಲಪಟಾಯಿಸಿರುವ ಆರೋಪಗಳು ಕೇಳಿ ಬಂದಿವೆ.
ಜಿಲ್ಲೆಯ ವಿವಿಧೆಡೆ ಕಾಮಗಾರಿ ಮಾಡಲು ಹಣ ವ್ಯಯಿಸಲಾಗಿದೆ. ಆದರೆ, ಕೆಲವು ಸ್ಥಳಗಳಲ್ಲಿ ಕಾಮಗಾರಿಯೇ ಪೂರ್ಣವಾಗದೆ ಹಣ ದುರುಪಯೋಗವಾಗಿದೆ ಎನ್ನಲಾಗಿದೆ. ಇನ್ನೂ ಕೆಲವೆಡೆ ಕಾಮಗಾರಿ ನಡೆಸದೆ ಹಣವನ್ನು ಅಧಿಕಾರಿಗಳು ಮಂಜೂರು ಮಾಡಿ ಬಳಕೆ ಪ್ರಮಾಣ ಪತ್ರ ನೀಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಅವ್ಯವಹಾರ ನಡೆದಿರುವ ಶಂಕೆಯಿಂದ ಮುಸ್ಲಿಂ ಸಮುದಾಯದ ಹೋರಾಟಗಾರರು ದಾಖಲೆಗಳನ್ನು ಸಂಗ್ರಹಿಸಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಎರಡು ಬಾರಿ, ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಸರ್ಕಾರದ ಆಧೀನ ಕಾರ್ಯದರ್ಶಿಗೆ ಎಂಟು ಬಾರಿ ಹಾಗೂ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಂಟು ದೂರುಗಳು ನೀಡಿದ್ದಾರೆ. ಅಲ್ಲದೆ ಯಾದಗಿರಿ ಜಿಲ್ಲಾಧಿಕಾರಿಗಳಿಗೂ ಈವರೆಗೆ ಎರಡು ಬಾರಿ ದೂರು ನೀಡಿದರೂ ಯಾವೊಬ್ಬ ಅಧಿಕಾರಿಯೂ ಪರಿಶೀಲನೆಗೂ ಮುಂದಾಗಿಲ್ಲ ಎಂದು ಸಾಮಾಜಿಕ ಹೋರಾಟಗಾರ ದಾವಲ್ ಸಾಬ್ ಇಸ್ಮಾಯಿಲ್ ಸಾಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಹಾಪುರ ತಾಲೂಕು ಗುಂಡಳ್ಳಿ ಗ್ರಾಮದ ಬಿಬಿ ಫಾತೀಮಾ ಖಬರಸ್ತಾನದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ 2017ರ ಜ. 24ರಂದು ಕಾಮಗಾರಿ ಮಂಜೂರಾತಿಯಂತೆ 1 ಲಕ್ಷ ರೂ. ಹಾಗೂ ಅದೇ ಕಾಮಗಾರಿಗೆ ಇನ್ನೊಮ್ಮೆ 2017ರ ಫೆ.17ರಂದು 2 ಲಕ್ಷ ರೂ. ಮಂಜೂರಾಗಿದೆ. ಕಾಮಗಾರಿ ಮಂಜೂರಾತಿ ದೊರೆತಾಗಿನಿಂದ ಅಭಿವೃದ್ಧಿ ಮಾಡಿಲ್ಲ. ಆದರೆ ದೂರು ನೀಡಿದ ಬಳಿಕ ಕೆಲವೆಡೆ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.
ವಕ್ಫ್ ಇಲಾಖೆಯಲ್ಲಿ ಕೋಟ್ಯಂತರ ಅವ್ಯವಹಾರ ನಡೆದರೂ ಸರ್ಕಾರ ಮತ್ತು ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಹಣ ದುರುಪಯೋಗ ಮಾಡಿದ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ವಕ್ಫ್ದಿಂದ ಬಿಡುಗಡೆಯಾದ ಅನುದಾನ ಸದ್ಬಳಕೆಯಾಗಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎನ್ನುತ್ತಾರೆ ಮುಸ್ಲಿಮ್ ಮುಖಂಡರು.