Advertisement

ವಿಕಲಚೇತನರ ಅಭಿವೃದ್ಧಿಗೆ ಶೇ. 5ರಷ್ಟು ಅನುದಾನ ಮೀಸಲಿಡಿ

03:30 PM Jul 13, 2019 | Naveen |

ಯಾದಗಿರಿ: ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗಾಗಿ ಶೇ. 5ರಷ್ಟು ಅನುದಾನ ಮೀಸಲಿಟ್ಟು ಅನುಷ್ಠಾನಗೊಳಿಸಬೇಕು ಎಂದು ದಿ ಅಸೋಸಿಯೇಷನ್‌ ಆಫ್‌ ಪೀಪಲ್ ವಿಥ್‌ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯ ವಕಾಲತ್ತು ವಿಭಾಗದ ಸಹಾಯಕ ನಿರ್ದೇಶಕ ಬಾಬು ಎಸ್‌. ಹೇಳಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಎಪಿಡಿ ಸಂಸ್ಥೆಯ ಸಹಯೋಗದಲ್ಲಿ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016 ಹಾಗೂ ಶೇ. 5ರಷ್ಟು ಅನುದಾನದ ಅನುಷ್ಠಾನದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇಲಾಖೆಗಳಲ್ಲಿ ವಿಕಲಚೇತನರಿಗೆ ಸ್ನೇಹಮಯ ವಾತಾವರಣ ನಿರ್ಮಿಸಿ, ಸಮಾನತೆಯಿಂದ ಕಾಣಬೇಕು ಎಂದು ಸಲಹೆ ನೀಡಿದ ಅವರು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರಡಿ ಸರ್ವತೋಮುಖ ಅಭಿವೃದ್ಧಿ ಅಂದರೆ ಶಿಕ್ಷಣ, ಪುನರ್ವಸತಿ, ಸಾಮಾಜಿಕ ಭದ್ರತೆ, ಉದ್ಯೋಗಗಳಲ್ಲಿ ಅವಕಾಶಗಳನ್ನು ಕಲ್ಪಿಸಿ, ಸಮಾಜದ ಮುಖ್ಯ ವಾಹಿನಿಗೆ ವಿಕಲಚೇತನರನ್ನು ತರುವ ನಿಟ್ಟಿನಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮ-1995ರ ಬದಲಿಗೆ ಪರಿಷ್ಕೃತ 2016ರ ಅಧಿನಿಯಮವನ್ನು ರೂಪಿಸಲಾಗಿದೆ. ಈ ಅಧಿನಿಯಮದಡಿ ಒಟ್ಟು 20 ವಿವಿಧ ಬಗೆಯ ಅಂಗವಿಕಲತೆಯನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಶರಣಪ್ಪ ಪಾಟೀಲ ಮಾತನಾಡಿ, ವಿಕಲಚೇತನರಿಗಾಗಿ ಇರುವ ಇಲಾಖೆ ಯೋಜನೆಗಳು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಡಿ ಸಂಸ್ಥೆಯ ವಕಾಲತ್ತು ವಿಭಾಗದ ಹಿರಿಯ ಸಂಯೋಜಕ ಚಿದಾನಂದ ಕೊಳಾರಿ ಕಾರ್ಯಗಾರದ ಕುರಿತು ಹಾಗೂ ಸಂಸ್ಥೆಯ ಯೋಜನೆಗಳ ಕುರಿತು ವಿವರಿಸಿದರು.

ಎಪಿಡಿ ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ಭರತ್‌ ನಾಯಕ, ಈರಣ್ಣ ಬಿರಾದಾರ, ಶಿಕ್ಷಣ ಸಂಯೋಜಕ ಮರೇಶಪ್ಪ ಬಾಗಲಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next