ಯಾದಗಿರಿ: ಪಿಎಸ್ಐ ಪರಶುರಾಮ ಸಾವು ಖಂಡಿಸಿ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ತಡೆದು ದಲಿತ ಸಂಘಟನೆ ಸೇರಿದಂತೆ, ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ-150 ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಮೊನ್ನೆ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಯಾದಗಿರಿಯ ವಿವಿಧ ಸಂಘಟನೆಗಳ ಒಕ್ಕೂಟಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಘಟನೆ ನಡೆದು 18 ಗಂಟೆ ಕಳೆದರೂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿಲ್ಲ. ಪೊಲೀಸ್ ಅಧಿಕಾರಿಗೆ ಅನ್ಯಾಯವಾದರೂ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಎಸ್ಐ ಪರಶುರಾಮ ಸಾವಿನ ಸುತ್ತ ಅನುಮಾನಗಳು ಶುರುವಾಗಿದ್ದು, ಯಾದಗಿರಿ ನಗರದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದ ಖಾಸಗಿ ಆಸ್ಪತ್ರೆ ಬಳಿ ವಿವಿಧ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿತ್ತು. ಈ ವೇಳೆ ಆ್ಯಂಬುಲೆನ್ಸ್ ಅಡ್ಡಗಟ್ಟಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಪಿಎಸ್ಐ ಪತ್ನಿ ಶ್ವೇತಾ, ಪತಿಯನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ. ಸ್ಥಳಕ್ಕೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಬರಲು ಹೇಳಿ, ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು. ಶಾಸಕ ಎಲ್ಲಿ? ಕರೆಯಿರಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಮಧ್ಯರಾತ್ರಿಯೂ ನನ್ನ ಗಂಡ ಕರ್ತವ್ಯ ಎಂದು ಓಡಾಡುತ್ತಿದ್ದ. ನನ್ನ ಗಂಡ ಏನು ಅನ್ಯಾಯ ಮಾಡಿದ್ದ ಮೇಡಂ. ಕರೆಯಿರಿ ಎಂಎಲ್ಎಯನ್ನು, ರಾತ್ರಿ ಆಗಲಿ, ಬೆಳಗಾಗಲಿ ಎಂಎಲ್ಎ ಬರೋವರೆಗೂ ನಾನ್ ಇಲ್ಲಿಂದ ಹೋಗಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿ ಮೇಡಂ. ನನ್ನ ಗಂಡ ಊಟ ಮಾಡೋದು ಬಿಟ್ಟು ಕೆಲಸ ಅಂತ ಓಡ್ತಿದ್ದ ಮೇಡಂ ಎಂದು ಯಾದಗಿರಿ ಎಸ್ಪಿ ಜಿ. ಸಂಗೀತಾ ಎದುರು ಶ್ವೇತಾ ಕಣ್ಣೀರು ಇಟ್ಟಿದ್ದಾರೆ.
ಎಸ್ಪಿ ಅವರಿಗೆ ಪತ್ರ.!
ಪಿಎಸ್.ಐ ಪರಶುರಾಮ ಪತ್ನಿ ಶ್ವೇತಾ ಅವರು ಕೈ ಬರಹದ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ.ಜಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪತಿಯ ಸಾವಿಗೆ ಕಾರಣರಾದ ರಾಜಕೀಯ ಒತ್ತಡ, ಪ್ರಭಾವಿಗಳ ಕಿರುಕುಳದ ಬಗ್ಗೆ ಸುದೀರ್ಘ ಮೂರು ಪುಟದಷ್ಟು ಪತ್ರ ಬರೆದಿದ್ದು ಆ ಪತ್ರ ಉದಯವಾಣಿ ಲಭ್ಯವಾಗಿದೆ.