ಯಾದಗಿರಿ: ಮಳೆ ಪ್ರವಾಹದಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳಾದ ಕಾಲರಾ, ಕರುಳು ಬೇನೆ, ಟೈಪಾಯಿಡ್ ಜ್ವರ, ವಾಂತಿ, ಭೇದಿ, ಹೆಪಟೈಟಿಸ್ ಮುಂತಾದ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಕಾರಣ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಲ್ಲಣ್ಣಗೌಡ ಎಸ್.ಪಾಟೀಲ ಸಲಹೆ ನೀಡಿದರು.
ಸುರಪುರ ತಾಲೂಕಿನ ದೇವಪುರ ಕ್ರಾಸ್ ಹಾಗೂ ತಿಂಥಣಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಸಾರ್ವಜನಿಕರು, ಮುಖಂಡರು ಹಾಗೂ ಗ್ರಾಪಂ ಸದಸ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ತಡೆಯಲು ಮುಂಜಾಗ್ರತೆಗಾಗಿ ಊಟಕ್ಕೆ ಮೊದಲು ಮತ್ತು ಶೌಚದ ನಂತರ ಕೈಗಳನ್ನು ಸೋಪಿನಿಂದ ತೊಳೆಯಬೇಕು. ಕಾಯಿಸಿ ಹಾರಿಸಿದ ನೀರು ಕುಡಿಯಬೇಕು. ಬಿಸಿ ಬಿಸಿಯಾದ ಆಹಾರ ಸೇವಿಸಬೇಕು. ಸೀನುವಾಗ, ಕೆಮ್ಮುವಾಗ, ಮೂಗು- ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ವಾಂತಿ ಭೇದಿಯಾದ ತಕ್ಷಣ ಪುನರ್ಜಲೀಕರಣ ದ್ರಾವಣ ಕುಡಿಸಬೇಕು ಮತ್ತು ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ರಸ್ತೆ ಬೀದಿಯಲ್ಲಿ ಮಾರಾಟ ಮಾಡುವ ತೆರೆದಿಟ್ಟ ಆಹಾರ, ತಿಂಡಿತಿನಸುಗಳನ್ನು ಸೇವಿಸಬಾರದು. ಆರೋಗ್ಯ ಸಮಸ್ಯೆಯಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಎಂದು ಸಲಹೆ ನೀಡಿದರು.
ಮನೆ ಸುತ್ತಮುತ್ತ ಶುಚಿಯಾಗಿಡಲು ಹಾಗೂ ಸೊಳ್ಳೆ ಕಡಿತದಿಂದ ದೂರವಿರಲು ಬಾಗಿಲು, ಕಿಟಕಿ ಮುಚ್ಚಬೇಕು ಹಾಗೂ ಸೊಳ್ಳೆ ಪರದೆ ಉಪಯೋಗಿಸಬೇಕು. ನೀರು ನಿಂತ ಸ್ಥಳಗಳಲ್ಲಿ ಸೀಮೆಎಣ್ಣೆ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ 24*7 ಉಚಿತ ಆರೋಗ್ಯ ಸಹಾಯವಾಣಿ- 104ಕ್ಕೆ ಕರೆ ಮಾಡಿ. ಮುಖ್ಯವಾಗಿ ದೇವಪುರ ಮತ್ತು ತಿಂಥಿಣಿ ಗ್ರಾಮಗಳಲ್ಲಿ ನೀರಿನ ಮೂಲಗಳ ಮಾದರಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮನೆ ಮನೆಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮ ಬಗ್ಗೆ ಆರೋಗ್ಯ ಶಿಕ್ಷಣ ನೀಡುವಂತೆ ಆರೋಗ್ಯ ಸಹಾಯಕರಿಗೆ ಆಶಾ ಕಾರ್ಯಕರ್ತೆಯರಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ| ಎಸ್.ಬಿ. ಪಾಟೀಲ, ತಾಲೂಕು ಆರೋಗ್ಯ ಅಧಿಕಾರಿ ಡಾ| ಆರ್.ವಿ. ನಾಯಕ, ಡಾ| ನಜೀಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ, ಸಾಹೇಬಗೌಡ, ಗಂಗಾಧರ, ಮಲ್ಲಿಕಾರ್ಜುನ, ನೀಲಮ್ಮ, ಭಾಗಪ್ಪ, ನಾಗಣ್ಣ, ನಾಗರಾಜ ಇದ್ದರು.