Advertisement

ಧೂಳು.. ಜನರ ಗೋಳು..!

11:47 AM May 19, 2019 | Naveen |

ಯಾದಗಿರಿ: ನಗರದ ಮುಖ್ಯರಸ್ತೆಗಳಲ್ಲೆಲ್ಲಾ ವಾಹನ ದಟ್ಟಣೆ ಹೆಚ್ಚುತ್ತಿರುವ ಜೊತೆ ಜೊತೆಗೆ ಧೂಳಿನ ಪ್ರಮಾಣವೂ ಹೆಚ್ಚಾಗುತ್ತಿದ್ದು, ಇದರಿಂದ ಧೂಳು ನಗರವೆಂಬ ಖ್ಯಾತಿಗೆ ಜಿಲ್ಲಾ ಕೇಂದ್ರ ಪಾತ್ರವಾಗುತ್ತಿದೆ.

Advertisement

ನಗರದ ಗಂಜ್‌ ಪ್ರದೇಶದಿಂದ ಬಸ್‌ ನಿಲ್ದಾಣದ ಮಾರ್ಗದಲ್ಲಿ ಹಳೆದ ಬಸ್‌ ನಿಲ್ದಾಣದವರೆಗೆ ರಸ್ತೆ ಅಕ್ಕಪಕ್ಕ ಸಾಕಷ್ಟು ಪ್ರಮಾಣದಲ್ಲಿ ಧೂಳು ಸಂಗ್ರಹಗೊಂಡಿದ್ದು, ಬಸ್‌ ಇನ್ನಿತರ ದೊಡ್ಡ ವಾಹನಗಳು ಸಂಚರಿಸಿದರೆ ಅದರ ಹಿಂದೆಯೇ ಧೂಳು ಹಿಂಬದಿ ಸವಾರರ ಕಣ್ಣಿಗೆ ಬೀಳುತ್ತಿದ್ದು ಇದರಿಂದ ಅನಾಹುತಗಳಾಗುವ ಸಂಭವವಿದೆ ಎಂದು ದ್ವಿಚಕ್ರ ವಾಹನ ಸವಾರರು ಭೀತಿ ಎದುರಿಸುವಂತಾಗಿದೆ.

ಮುದ್ನಾಳ ಪೆಟ್ರೋಲ್ ಪಂಪ್‌ ಮಾರ್ಗವಾಗಿ ತಹಸೀಲ್ದಾರ್‌ ಕಚೇರಿ ಮಾರ್ಗದಲ್ಲಿಯೂ ವ್ಯಾಪಕ ಧೂಳಿನಿಂದ ಜನ ತೊಂದರೆ ಅನುಭವಿಸುವಂತಾಗಿದೆ. ಧೂಳಿನಿಂದ ಶ್ವಾಸಕೋಶ, ಉಸಿರಾಟ ಹಾಗೂ ಚರ್ಮ ರೋಗಗಳು ಬರುವ ಸಾಧ್ಯತೆಗಳಿದ್ದು, ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿತ್ಯ ರಸ್ತೆ ಪಕ್ಕದಲ್ಲಿ ನೀರು ಸಿಂಪಡಿಸುವ ಕಾರ್ಯವನ್ನು ಮಾಡಲು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆ ಪಕ್ಕದ ಮಳಿಗೆ ವ್ಯಾಪಾರಸ್ಥರು ಧೂಳಿನಿಂದ ಬೇಸತ್ತು ಹೋಗಿದ್ದು, ಅಳಲನ್ನು ಯಾರಿಗೆ ಹೇಳಬೇಕು ಎನ್ನುವುದು ತೋಚದೆ ತೊಂದರೆಯಲ್ಲಿಯೇ ಅನಿವಾರ್ಯವಾಗಿ ಕಾಲ ಕಳೆಯುವಂತಾಗಿದೆ. ಭಯದಿಂದ ಬೆಳಗ್ಗೆಯಿಂದ ರಾತ್ರಿಯವರೆಗೆ ಮೂಗಿಗೆ ಬಟ್ಟೆ ಕಟ್ಟಿಕೊಂಡೇ ವ್ಯಾಪಾರ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಧೂಳು ವ್ಯಾಪಕವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೆ ನಗರಸಭೆ ಅಧಿಕಾರಿಗಳು ಮಾತ್ರ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹೆಚ್ಚು ಧೂಳಿನಿಂದ ಮನುಷ್ಯ ಸಾಕಷ್ಟು ತೊಂದರೆಗಳಿಗೆ ಸಿಲುಕಿಕೊಳ್ಳುತ್ತಾನೆ. ಮೊದಲಿಗೆ ಕೆಮ್ಮು-ದಮ್ಮು ಪ್ರಾರಂಭಗೊಂಡು ಉಸಿರಾಟ ತೊಂದರೆಯಾಗುತ್ತದೆ. ದಿನ ಕಳೆದಂತೆ ಅಲರ್ಜಿಕ್‌ ಬ್ರ್ಯಾಂಕೈಟೀಸ್‌ ಆಗುವ ಸಾಧ್ಯತೆಗು ಇವೆ. ಅಲ್ಲದೇ ಡರ್ಮಾಟೈಟಿಸ್‌ನಂತಹ ಚರ್ಮ ವ್ಯಾಧಿಯೂ ಆಗಬಹುದು ಎನ್ನುತ್ತಾರೆ ವೈದ್ಯರು.

ನಗರದ ಮುಖ್ಯಬೀದಿಗಳಲ್ಲಿ ಧೂಳು ಹೆಚ್ಚಾಗಿದ್ದು, ಬೃಹತ್‌ ಗಾತ್ರದ ವಾಹನಗಳು ಸಂಚರಿಸಿದರೆ ರಸ್ತೆಯಲ್ಲಿರುವ ಎಲ್ಲರ ಮುಖಕ್ಕೆ ಧೂಳು ಆವರಿಸುತ್ತದೆ.ದೊಡ್ಡ ವಾಹನಗಳ ಹಿಂದೆ ಬರುವ ದ್ವಿಚಕ್ರ ವಾಹನ ಸವಾರರು ಧೂಳಿನಿಂದ ತೀರಾ ತೊಂದರೆ ಅನುಭವಿಸುವಂತಾಗಿದೆ. ಕಣ್ಣುಗಳಲ್ಲಿ ಧೂಳು ಹೋಗಿ ಅಪಾಯಕ್ಕೆ ಎಡೆಮಾಡುವ ಸಾಧ್ಯತೆಗಳಿದ್ದು ಅಧಿಕಾರಿಗಳು ಇತ್ತ ಗಮನಹರಿಸಬೇಕು.
•ಸುನೀಲ್, ಸ್ಥಳೀಯರು

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next