ಯಾದಗಿರಿ: ಜಿಲ್ಲೆಯ ನ್ಯಾಯಯುತ ನೀರನ್ನು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ಧಾರೆ ಎರೆದುಕೊಟ್ಟು ನಮಗೆ ಅನ್ಯಾಯ ಮಾಡಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ರೈತ ಸಂಘದ ಕಲಬುರಗಿ ವಿಭಾಗೀಯ ಮಹಿಳಾ ಘಟಕದ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳಮಠ ಟೀಕಿಸಿದರು.
ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರ ದೇವಸ್ಥಾನ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ಕಡೆ ಬರಗಾಲ ತಾಂಡ ಆಡುತ್ತಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ನೀರನ್ನು ನಮ್ಮ ಜನಕ್ಕೆ ಕೊಡುವುದು ಬಿಟ್ಟು ಉದ್ದಿಮೆಗೆ ಹರಿಸುವುದನ್ನು ಕ್ಷಮಿಸಲಾಗದು. ಇದಕ್ಕೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ನೂತನ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ಜಿಲ್ಲೆಯ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಬೆಳೆದ ರೈತರಿಗೆ 70 ಕೋಟಿ ರೂ. ಬಾಕಿ ಇಟ್ಟುಕೊಂಡು ವಂಚಿಸುತ್ತಿದ್ದು, ಇದನ್ನು ತಕ್ಷಣ ಪರಿಹರಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ನೀತಿ ಸಂಹಿತೆ ನಂತರ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.
ಜಿಲ್ಲಾದ್ಯಂತ ಗ್ರಾಮೀಣ ರಸ್ತೆಗಳು ಹದಗೆಟ್ಟು ಹೋಗಿವೆ. ಬೇಸಿಗೆ ಸಂದರ್ಭ ಮತ್ತು ಬರದ ಸಂದರ್ಭದಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಹೋರಾಟಕ್ಕೆ ಸಜ್ಜಾಗಲಿದ್ದೇವೆ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘವನ್ನು ಪುನಃ ರಚಿಸಲಾಯಿತು.