Advertisement

ಬದುಕಿನಲ್ಲಿ ಜ್ಞಾನ ಜ್ಯೋತಿ ಬೆಳಗುವವನೇ ಗುರು

04:08 PM Jul 17, 2019 | Naveen |

ಯಾದಗಿರಿ: ಮನುಷ್ಯನಿಗೆ ಜ್ಞಾನದ ಜ್ಯೋತಿಯನ್ನು ಬೆಳಗುವುದರ ಮೂಲಕ ಬದುಕಿನಲ್ಲಿ ಬೆಳಕನ್ನು ನೀಡುವವನೇ ಗುರು ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಡಾ| ಗಂಗಾಧರ ಸ್ವಾಮೀಜಿ ಹೇಳಿದರು.

Advertisement

ಮಂಗಳವಾರ ಅಬ್ಬೆತುಮಕೂರಿನ ಶ್ರೀಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗುರು ಆದವನು ಶಿಷ್ಯನನ್ನು ಭಕ್ತಿಯ ಶಕ್ತಿಯಿಂದ ಬಲಿಷ್ಠರನ್ನಾಗಿ ಮಾಡುತ್ತಾನೆ. ದುಷ್ಟ ಸಂಘ ಬಿಡಿಸಿ, ಸತ್ಸಂಗವನ್ನು ಕೊಡಿಸಿ ಆ ಮೂಲಕ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಅಗತ್ಯವೆಂದು ಹೇಳಿದರು.

ಗುರು ಆದವನು ಸದಾ ಶಿಷ್ಯರ ಒಳಿತನ್ನೇ ಬಯಸುತ್ತಾನೆ. ತನ್ನ ಬದುಕಿನಲ್ಲಿ ಸಂಪಾದಿಸಿದ ಜ್ಞಾನ, ತಪ್ಪಸ್ಸು, ವಿದ್ಯೆಗಳನ್ನು ಶಿಷ್ಯನಿಗೆ ಧಾರೆ ಎರೆಯುವುದರ ಮೂಲಕ ಬದುಕನ್ನು ರೂಪಿಸಿತ್ತಾನೆ. ವಿನಯ, ವಿವೇಕವನ್ನು ಕಲಿಸುವುದರ ಮೂಲಕ ಶಿಷ್ಯನ ಜೀವನವನ್ನು ಗುರು ಆದವನು ಉದ್ಧರಿಸುತ್ತಾನೆ ಎಂದು ತಿಳಿಸಿದರು.

ಗುರು ಎಂದರೆ ಜ್ಞಾನ, ಗುರು ಎಂದರೆ ಬೆಳಕು, ಶಿಷ್ಯನ ಜೀವನದಲ್ಲಿನ ಕತ್ತಲೆ ಕಳೆದು ಅಲ್ಲಿ ಜ್ಞಾನ ಬೆಳಕನ್ನು ಮೂಡಿಸಿ ಶಿಷ್ಯನ ಬಾಳು ಬೆಳಗುತ್ತಾನೆ. ಅದಕ್ಕಾಗಿ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅಘಾದವಾದ ಸ್ಥಾನವಿದೆ ಎಂದರು.

ಬೆಳಗ್ಗೆ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನೆರವೇರಿತು. ನಂತರ ಮಠದ ಪೀಠಾಧಿಪತಿ ಡಾ| ಗಂಗಾಧರ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಲಾಯಿತು.

Advertisement

ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಡಾ| ಸುಭಾಶ್ಚಂದ್ರ ಕೌಲಗಿ, ಎಸ್‌.ಎನ್‌. ಮಿಂಚನಾಳ ಸೇರಿದಂತೆ ಅನೇಕ ಭಕ್ತರು ಇದ್ದರು.

ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ: ಗುರು ಪೂರ್ಣಿಮೆ ನಿಮಿತ್ತ ನಗರದ ಸ್ಟೇಷನ್‌ ಏರಿಯಾದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರೆದಿದ್ದ ಸಹಸ್ರಾರು ಭಕ್ತಾದಿಗಳ ಮಧ್ಯೆ ಜರುಗಿತು.

ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎಲ್. ಜಿ. ರೆಡ್ಡಿ, ಅಧ್ಯಕ್ಷ ರವಿ ನಾಯಕ, ಉಪಾಧ್ಯಕ್ಷರಾದ ಭೀಮರಾವ ಚಂಡ್ರಕಿ, ಬಸವರಾಜ ಪಾಟೀಲ ಬಿಳಾØರ, ಪ್ರಧಾನ ಕಾರ್ಯದರ್ಶಿ ನಾಗರಾಜ ಬೀರನೂರು, ಕಾರ್ಯದರ್ಶಿ ಇಂದುಧರ ಸಿನ್ನೂರ, ಬಸವರಾಜ ಅರಳಿ, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರು, ಜಯಶ್ರೀ ಯಗನಾಥರೆಡ್ಡಿ, ರವಿ ಮಾಲಿ ಪಾಟೀಲ, ಲಲಿತಾ ಅನಪುರ ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸಾಯಿಬಾಬಾ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next