Advertisement

ಬಾರಾಸಾಲ್ ಕೇ ಬಾದ್‌ ಆ ರಹೇ ಹೈ ಸಿಎಂ!

11:12 AM Jun 12, 2019 | Naveen |

ಅನೀಲ ಬಸೂದೆ
ಯಾದಗಿರಿ:
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 2007ರಲ್ಲಿ ಜಿಲ್ಲೆಯ ಸುರಪುರ ತಾಲೂಕಿನ ಕನ್ನಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರೂ ಅಲ್ಲಿನ ಸ್ಥಿತಿಗತಿ ಬದಲಾಗಿಲ್ಲ.

Advertisement

ಮುಖ್ಯಮಂತ್ರಿಗಳು ಬರುವ ವೇಳೆ ಗ್ರಾಮಕ್ಕೆ ಸಂಕರ್ಪ ಕಲ್ಪಿಸುವ ರಸ್ತೆ ಯಾವ ಸ್ಥಿತಿಯಲ್ಲಿತ್ತೋ ಇಂದಿಗೂ ಅದೇ ರೀತಿಯಿದೆ. ಅಂದು ಇಲ್ಲಿನ ನಿವಾಸಿಗಳಿಗೆ ನೀಡಿದ ಭರವಸೆಗಳೂ ಈಡೇರಿಲ್ಲ.

ಇದೀಗ 12 ವರ್ಷಗಳ ಬಳಿಕ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಇನ್ನೊಮ್ಮೆ ಗ್ರಾಮ ವಾಸ್ತವ್ಯದ ಮೂಲಕ ಆಡಳಿತವೇ ಗ್ರಾಮಕ್ಕೆ ಬರುವಂತಾಗಿದೆ. ಎಷ್ಟರ ಮಟ್ಟಿಗೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೇ ಎನ್ನುವುದೇ ಪ್ರಶ್ನೆಯಾಗಿ ಕಾಡತೊಡಗಿದೆ. ಈ ಬಾರಿ ಹಿಂದುಳಿದ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಿಂದ ಗ್ರಾಮ ವಾಸ್ತವ್ಯ ಆರಂಭಿಸಿರುವ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದರಿಂದ ಈ ಭಾಗದ ಜನರ ಬೇಡಿಕೆಗಳು ಈಡೇರಿಸುವರೇ ಎನ್ನುವ ಕುರಿತು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಕನ್ನಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ ಅವರು ಬರುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಕೆಲ ಕಡೆ ಸಿಸಿ ರಸ್ತೆ ನಿರ್ಮಿಸಲಾಗಿತ್ತು, ಆದರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತಯೇ ಹಾಳಾಗಿದ್ದು, ಇದರ ಅಭಿವೃದ್ಧಿಗೆ ಈವರೆಗೂ ಯಾರೊಬ್ಬರು ಕಾಳಜಿ ವಹಿಸಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಪ್ರಮುಖವಾಗಿ ಗ್ರಾಮಕ್ಕೆ ಪ್ರೌಢಶಾಲೆಗೆ ಹೊಸ ಕಟ್ಟಡ ಮಂಜೂರು ಮಾಡುವ ಭರವಸೆ ನೀಡಿದ್ದರು. ಲಕ್ಷಾಂತರ ರೂ. ವೆಚ್ಚದ ಕಟ್ಟಡ ನಿರ್ಮಾಣವಾಗಿದೆ. ಆದರಿದು ವಿದ್ಯಾರ್ಥಿಗಳ ಉಪಯೋಗಕ್ಕೆ ಬಾರದೆ ಕುಡುಕರಿಗೆ ಹೇಳಿ ಮಾಡಿಸಿದಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

Advertisement

2013-14ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಕಾಮಗಾರಿಯನ್ನು ಹೈದ್ರಾಬಾದ್‌ ಏಜೆನ್ಸಿಯೊಂದಕ್ಕೆ ನಿರ್ವಹಿಸಲಾಗಿತ್ತು, ಆದರೆ ಏಜೆನ್ಸಿ ಕಾಮಗಾರಿಯನ್ನು ಸಂಪೂರ್ಣಗೊಳಿಸಿಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಇದರಿಂದಾಗಿ ಕಟ್ಟಡ ಉದ್ಘಾಟನೆಗೊಳ್ಳದೆ ಪಾಳು ಬೀಳುವಂತಾಗಿದೆ.

ಗ್ರಾಮದಲ್ಲಿರುವ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಸಂಪರ್ಕ ಸೌಕರ್ಯ ಒದಗಿಸುವುದು, ಪಶು ಆಸ್ಪತ್ರೆ, ಬ್ಯಾಂಕ್‌, ಗ್ರಂಥಾಲಯ ಆರಂಭಿಸುವುದು, ಕನ್ನಳ್ಳಿ-ಹುಣಸಗಿ ರಸ್ತೆ ನಿರ್ಮಾಣ, ಕನ್ನಳ್ಳಿ-ಕನ್ನಳ್ಳಿ ಕ್ಯಾಂಪ್‌ ರಸ್ತೆ ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದರು. ಬಸ್‌ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ಬೇಡಿಕೆಯೂ ಹಾಗೆ ಉಳಿದುಕೊಂಡಿದ್ದು, ಇಂದಿಗೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಅಂಗವಿಕಲ ವ್ಯಕ್ತಿಗೆ ಸ್ಪಂದಿಸದ ಹೃದಯಗಳು: 2007ರ ಆಗಸ್ಟ್‌ 20ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವೇಳೆ ಶಹಾಪುರಿನ ಹಳಿಸಗರದ ನಿರುದ್ಯೋಗಿ ಬಡ ಅಂಗವಿಕಲ ಯುವಕನೊಬ್ಬ ಜೀವನ ಸಾಗಿಸುವುದಕ್ಕೆ ಯಾವುದಾದರೂ ಕಚೇರಿಯಲ್ಲಿ ವಿದ್ಯಾರ್ಹತೆಗೆ ಅನುಸಾರ ಉದ್ಯೋಗ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡು ಅರ್ಜಿ ಸಲ್ಲಿಸಿದ್ದ. ಅಲ್ಲದೇ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೂ ಹಲವು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಹಲವು ಬಾರಿ ಜಿಲ್ಲಾಡಳಿತಕ್ಕೆ ಕಳಿಸಿದರೂ ಉತ್ತರ ದೊರಕಿಲ್ಲ. ಮಾನವೀಯ ದೃಷ್ಟಿಯಿಂದಾರೂ ಅಧಿಕಾರಿಗಳು ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ಸಾಕಷ್ಟು ಅವಕಾಶಗಳಿವೆ. ಆದರೆ ನಮ್ಮಂಥವರ ನೆರವಿಗೆ ಯಾರೂ ಬರುವುದಿಲ್ಲ ಎಂದು ನೊಂದ ಭೀಮರಾಯ ಅಳಲು ತೋಡಿಕೊಂಡಿದ್ದಾನೆ.

ಮುಖ್ಯಮಂತ್ರಿಗಳು ಈ ಹಿಂದೆ ನಡೆಸಿದ ಗ್ರಾಮ ವಾಸ್ತವ್ಯದ ವೇಳೆ ಸಲ್ಲಿಸಿದ ಬೇಡಿಕೆಗಳಲ್ಲಿ ಸಮರ್ಪಕವಾಗಿ ಒಂದೂ ಈಡೇರಿಲ್ಲ. ಆಗಿದ್ದ ಕಚ್ಚಾ ರಸ್ತೆ ಇನ್ನೂ ಹಾಗೆ ಇದೆ. ಗ್ರಂಥಾಲಯ, ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಪಶು ಆಸ್ಪತ್ರೆಗಳ ಬೇಡಿಕೆ ಸಲ್ಲಿಸಿರುವ ಬಗ್ಗೆ ಇನ್ನೂನೆನಪಿದೆ.
ಸಿದ್ಧು ಕುಂಬಾರ, ಕನ್ನಳ್ಳಿ ಗ್ರಾಮಸ್ಥ

ಬೇಡಿಕೆಯಂತೆ ಪ್ರೌಢಶಾಲೆ ಕಟ್ಟಡ ಮಂಜೂರಾಗಿದೆ. ಕಾಮಗಾರಿ ನಡೆದು ಐದು ವರ್ಷಗಳಾಗುತ್ತಿದೆ. ಕಟ್ಟಡ ಅಪೂರ್ಣ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಉಪಯೋಗವಾಗದೇ ಲಕ್ಷಾಂತರ ರೂ.ಗಳು ನೀರಿಗೆ ಹಾಕಿದಂತಾಗಿದೆ. ಗ್ರಾಮಕ್ಕೆ ಬಸ್‌ ನಿಲ್ದಾಣವಿಲ್ಲ. ಒಂದೂ ಶುದ್ಧ ಕುಡಿಯುವ ನೀರಿನ ಘಟಕವೂ ಇಲ್ಲ.
ಮಲ್ಲು ಚನಕೂಟಿ, ಕನ್ನಳ್ಳಿ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next