ಯಾದಗಿರಿ: ಜಿಲ್ಲೆಯಲ್ಲಿ ತೀವ್ರ ಬರ ಆವರಿಸಿದ್ದು, ಜಾನುವಾರುಗಳಿಗೆ ತಿನ್ನಲು ಮೇವು ಸಿಗದೇ ತಿಪ್ಪೆಗಳಲ್ಲಿನ ತ್ಯಾಜ್ಯ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಗೋಶಾಲೆ ತೆರೆಯಲು ಮುಂದಾಗುತ್ತಿಲ್ಲ.
ಸಮರ್ಪಕ ನೀರು ಮತ್ತು ಮೇವು ಸಿಗದ ಕಾರಣ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕನಿಷ್ಟ ಹೋಬಳಿಗೊಂದರಂತೆ ಮೇವು ಬ್ಯಾಂಕ್ ತೆರೆದು ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕಿದ್ದ ಜಿಲ್ಲಾಡಳಿತ ನಾಮಕಾವಾಸ್ತೆ ಎನ್ನುವಂತೆ ಮೇವು ಬ್ಯಾಂಕ್ ತೆರೆದು ಕೈ ತೊಳೆದುಕೊಂಡಿದೆ ಎಂಬುದು ರೈತರ ಆರೋಪ.
168 ಮೆಟ್ರಿಕ್ ಟನ್ ಮೇವು ಸಂಗ್ರಹ: ಜಿಲ್ಲೆಯಲ್ಲಿ ತೀವ್ರ ಬರ ಇರುವ ಹಿನ್ನೆಲೆ ನವೆಂಬರ್ ತಿಂಗಳಿನಲ್ಲಿಯೇ ಜಿಲ್ಲಾಡಳಿತ ಭತ್ತದ ಹುಲ್ಲು ಸಂಗ್ರಹಿಸಲು ಕ್ರಮವಹಿಸಿ, ಸುಮಾರು 168 ಮೆಟ್ರಿಕ್ ಟನ್ ಮೇವು ಬೇಲ್ ಮಾಡಿಸಿ ಸಂಗ್ರಹಿಸಿದೆ. ಅಲ್ಲದೇ ಜೋಳದ ಕಣಿಕಿಗೆ ರೈತರಿಂದ ಬೇಡಿಕೆ ಇರುವುದರಿಂದ ಶಹಾಪುರ ಪಶು ಆಸ್ಪತ್ರೆ ಆವರಣ ಮತ್ತು ಕೆಂಭಾವಿ ಎಪಿಎಂಸಿಯಲ್ಲಿ 50 ಮೆಟ್ರಿಕ್ ಟನ್ ಜೋಳದ ಕಣಿಕಿ ಕೂಡ ಸಂಗ್ರಹಿಸಲಾಗಿದೆ.
7 ಕಡೆ ಮೇವು ಬ್ಯಾಂಕ್: ಯಾದಗಿರಿ ತಾಲೂಕಿನಲ್ಲಿ ಯಾದಗಿರಿ ಎಪಿಎಂಸಿ ಆವರಣ, ಗುರುಮಠಕಲ್ ಎಪಿಎಂಸಿ ಆವರಣ, ಶಹಾಪುರ ತಾಲೂಕಿನಲ್ಲಿ ಶಹಾಪುರ ಪಶು ಆಸ್ಪತ್ರೆ ಆವರಣ, ದೋರನಹಳ್ಳಿ ಪಶುವೈದ್ಯಕೀಯ ಡಿಪ್ಲೋಮಾ ಪಾಲಿಟೆಕ್ನಿಕ್ ಕಾಲೇಜು, ಸುರಪುರ ತಾಲೂಕಿನಲ್ಲಿ ಸುರಪುರ ಎಪಿಎಂಸಿ ಆವರಣ, ಹುಣಸಗಿ ಯುಕೆಪಿ ಕ್ಯಾಂಪ್ ಆವರಣ ಹಾಗೂ ಕೆಂಭಾವಿ ಎಪಿಎಂಸಿ ಆವರಣಗಳಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ.
ಹೆಚ್ಚಿನ ಮೇವು ಬ್ಯಾಂಕ್ ಸ್ಥಾಪಿಸಿ: ವಡಗೇರಾ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ಸ್ಥಾಪನೆಯಾಗಿಲ್ಲ. ತಾಲೂಕು ಕೇಂದ್ರ ಘೋಷಣೆಯಾದರೂ ಯಾವುದಕ್ಕೂ ಲೆಕ್ಕಕ್ಕಿಲ್ಲದಂತಾಗಿದೆ. ಈ ಭಾಗದ ರೈತರು ಮೇವು ತರಲು ದೋರನಹಳ್ಳಿಗೆ ತೆರಳಬೇಕಾದರೂ ತುಂಬಾ ದೂರ ಕ್ರಮಿಸಬೇಕಾಗುತ್ತದೆ. ಹಾಗಾಗಿ ಹೋಬಳಿ ಕೇಂದ್ರಕ್ಕೆ ಒಂದರಂತೆ ಮೇವು ಬ್ಯಾಂಕ್ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಬರದಿಂದ ಜಾನುವಾರುಗಳಿಗೆ ಸರಿಯಾಗಿ ಮೇವು ಸಿಗದೇ ಕಾಗದಗಳನ್ನು ತಿನ್ನುತ್ತಿವೆ. ಸಮರ್ಪಕ ನೀರು, ಮೇವಿನ ವ್ಯವಸ್ಥೆಯೂ ಇಲ್ಲ. ಗೋ ಶಾಲೆಯ ಮಾತು ಮೊದಲೇ ಇಲ್ಲ. ರೈತರಿಗೆ ಅನುಕೂಲವಾಗುವಂತೆ ಮೇವು ಬ್ಯಾಂಕ್ ಕೂಡ ಸ್ಥಾಪಿಸಿಲ್ಲ. ವಡಗೇರಾ ಭಾಗದ ರೈತರಿಗೆ ಮೇವು ತರುವುದಕ್ಕೆ ಕಷ್ಟವಾಗಿದೆ.
•
ನಿಂಗಣ್ಣ ಜಡಿ, ರೈತ ಮುಖಂಡ
ಈಗಾಗಲೇ 168 ಮೆಟ್ರಿಕ್ ಟನ್ ಮೇವು ಸಂಗ್ರಹಿಸಿ, 7 ಕಡೆ ಮೇವು ಬ್ಯಾಂಕ್ ಸ್ಥಾಪಿಸಿ ಅನುಕೂಲ ಮಾಡಲಾಗಿದೆ. ಈವೆರೆಗೆ 6 ಮೆಟ್ರಿಕ್ ಟನ್ ಮೇವು ವಿತರಣೆಯಾಗಿದೆ. ಈ ಹಿಂದೆಯಷ್ಟೇ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ಸದ್ಯಕ್ಕೆ ಯಾವುದೇ ರೋಗದ ಭೀತಿಯಿಲ್ಲ. ಮಳೆಗಾಲದಲ್ಲಿ ರೋಗ ಬರುವ ಸಾಧ್ಯತೆಗಳಿರುತ್ತದೆ.
•
ಡಾ| ಶರಣಭೂಪಾಲರೆಡ್ಡಿ,
ಪಶು ಸಂಗೋಪನಾ ಇಲಾಖೆ, ಉಪನಿರ್ದೇಶಕ
ಅನೀಲ ಬಸೂದೆ