ಯಾದಗಿರಿ: ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರು ಹಣದ ಹಿಂದೆ ಓಡುತ್ತಿರುವುದು ತಮ್ಮ ಆರೋಗ್ಯದ ಕಡೆ ಗಮನ ಹರಿಸುವಲ್ಲಿ ನಿರ್ಲಕ್ಷ್ಯ ವಹಿಸಬಾರದು. ಜೀವನದಲ್ಲಿ ಎಷ್ಟು ಗಳಿಸಿದರೂ ಏನು ನಮ್ಮೊಂದಿಗೆ ಬರುವುದಿಲ್ಲ. ಹಾಗಾಗಿ ಗಾದೆ ಮಾತಿನಂತೆ ಆರೋಗ್ಯವೇ ಮಹಾಭಾಗ್ಯವಾಗಿದೆ ಎಂದು ಗುರುಮಠಕಲ್ ಖಾಸಾ ಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಆರ್.ಕೆ. ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಹಾಗೂ ಅಬಟ್ ಫಾರ್ಮಸಿ ಕಂಪನಿ ಸಹಯೋಗದೊಂದಿಗೆ ಆರ್.ಕೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಥೈರಾಯ್ಡ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಯಾಂತ್ರಿಕ ಬದುಕಿನಲ್ಲಿ ಮನುಷ್ಯ ತನ್ನ ಹಣದ ವ್ಯಾಮೋಹದಲ್ಲಿ ಉತ್ತಮ ಆಹಾರ, ಬೆವರಿಲ್ಲದ ದುಡಿಮೆಯಿಂದ ತನ್ನ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದು ಇದು ಅಪಾಯಕರ. ದೇವರ ಗುಡಿಯಂತೆ ಇಂದು ಆರೋಗ್ಯಕ್ಕಾಗಿ ಆಸ್ಪತ್ರೆಗಳು ನಿರ್ಮಾಣವಾಗುತ್ತಿವೆ ಎಂದರು.
ಆರೋಗ್ಯದ ಯಾವುದೇ ಸಮಸ್ಯೆಗಳು ಆದರೆ ದೂರದ ಹೈದ್ರಾಬಾದ್, ಮುಂಬೈ, ಸೊಲ್ಲಾಪುರ, ಬೆಂಗಳೂರಿಗೆ ಹೋಗುವ ಬದಲು ನಮ್ಮ ಹತ್ತಿರ ಇರುವ ಒಳ್ಳೆ ಪರಿಣಿತ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ ಶ್ರೀಗಳು, ಯಾದಗಿರಿ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಬರುತ್ತಿರುವುದು ಅನುಕೂಲವಾಗಿದೆ ಎಂದರು.
ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ಬಡವರ್ಗದ ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದ ಅವರು, ದೇಹದಲ್ಲಿ ಯಾವುದೇ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಮತ್ತು ರಕ್ತದ ಒತ್ತಡದ ಕಾಯಿಲೆಗಳು ಸಾಮಾನ್ಯವಾಗಿದ್ದು, ಪ್ರಾರಂಭದಲ್ಲೇ ಚಿಕಿತ್ಸೆ ಪಡೆದು ನಿಯಂತ್ರಿಸಿಕೊಳ್ಳುವುದು ಉತ್ತಮ ಎಂದರು.
ಯಾದಗಿರಿ ನಗರದಲ್ಲಿ ಪರಿಣಿತ ವೈದ್ಯರು ಇದ್ದು, ಇಲ್ಲೆ ಚಿಕಿತ್ಸೆ ಪಡೆಯುವ ಮೂಲಕ ವೈದ್ಯರಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಇನ್ನೂ, ಆಸ್ಪತ್ರೆಗೆ ಕಡಿಮೆ ಪ್ರಮಾಣದಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ ಎಂದು ನಮ್ಮ ಊರು ಬಿಟ್ಟು ಹೋಗದಿರಿ. ನಮ್ಮ ಊರಿನ ಜನರಿಗೆ ತಮ್ಮ ಸೇವೆ ಅಮೂಲ್ಯವಾಗಿದೆ. ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ತಮ್ಮ ಹತ್ತಿರ ಬರಲಿದ್ದಾರೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಚೆನ್ನಾರೆಡ್ಡಿ ಪಾಟೀಲ ತುನ್ನೂರ್ ಮಾತನಾಡಿ, ಸಕ್ಕರೆ ಕಾಯಿಲೆಯನ್ನು ಶತ್ರುವಿನಂತೆ ಕಾಣದಿರಿ. ವಯಸ್ಸಿಗೆ ತಕ್ಕಂತೆ ಜತೆಯಲ್ಲೇ ಬರುವ ಸ್ನೇಹಿತನಂತೆ ಭಾವಿಸಿದರೆ ತೊಂದರೆಗಳು ಇರುವುದಿಲ್ಲ. ಸಕ್ಕರೆ ಕಾಯಿಲೆ ನೆನೆಸಿದಂತೆಲ್ಲಾ ಬಿಪಿ-ಶುಗರ್ ಹೆಚ್ಚಲಿದೆ. ಹಾಗಾಗಿ ನಿಯಮಿತ ವ್ಯಾಯಾಮ ಮಾಡುವುದು ರೂಢಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಅಲ್ಲಮಪ್ರಭು ಅಭಿವೃದ್ಧಿ ಅಕಾಡೆಮಿ ಅಧ್ಯಕ್ಷ ಸೋಮಶೇಖರ ಮಣ್ಣೂರು, ಆಸ್ಪತ್ರೆಯ ಆಡಳಿತ ಮಂಡಳಿ ಮುಖ್ಯಸ್ಥ ವೀರಣ್ಣ ರ್ಯಾಖಾ, ಡಾ| ರವಿಕುಮಾರ್ ವಿ. ರ್ಯಾಖಾ, ಡಾ| ಪೂಜಾ ರ್ಯಾಖಾ, ಡಾ| ಸುನೀಲ ಮುಕನೂರ್, ಈಶಪ್ಪ ರ್ಯಾಖಾ, ಎಸ್.ಬಿ. ರ್ಯಾಖಾ, ಬಸವರಾಜ್ ರ್ಯಾಖಾ, ಮಹಿಪಾಲರೆಡ್ಡಿ, ಯಾಮರೆಡ್ಡಿ ಮುಂಡಾಸ್, ರಾಜಶೇಖರ ಪಾಟೀಲ ಕೀಲ್ಲನಕೇರಾ, ಆರ್.ಎಸ್. ಪಾಟೀಲ, ವಾಹಿದ್ ಸುಯಾನ್, ಬಸವರಾಜ್ ರಾಜಾಪುರ, ಜಗದೀಶ ಪಾಟೀಲ ಆಶನಾಳ್, ಡಾ| ಭೀಮರಾಯ ಲಿಂಗೇರಿ, ಗುರುಪ್ರಸಾದ್ ವೈದ್ಯ ಸೇರಿದಂತೆ ಇತರರು ಇದ್ದರು.