Advertisement

ಪ್ರವಾಹದಲ್ಲಿ ಕೊಚ್ಚಿ ಹೋದ ರೈತ

11:52 AM Aug 09, 2019 | Naveen |

ಯಾದಗಿರಿ: ತಾಲೂಕಿನ ಕೌಳೂರು ಹೊರವಲಯದ ನದಿ ಪಾತ್ರಕ್ಕಿಳಿದಿದ್ದ ಸಾಬರಡ್ಡಿ(34) ಎಂಬ ರೈತ ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಘಟನೆ ನಡೆದಿದೆ.

Advertisement

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿ ಪಾತ್ರಕ್ಕೆ 1 ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ನೀರು ಹರಿಬಿಟ್ಟಿರುವುದು ಯಾದಗಿರಿ ಭೀಮಾ ನದಿಯಿಂದ ಕೌಳೂರು ಮಾರ್ಗವಾಗಿ ರಭಸದಿಂದ ನೀರು ಹರಿಯುತ್ತಿದೆ. ತನ್ನ ಜಮೀನಿಗೆ ನೀರು ಪಡೆಯಲು ನದಿಪಾತ್ರಕ್ಕೆ ಹಾಕಿದ್ದ ಮೋಟರ್‌ ತೆಗೆಯಲು ಗುರುವಾರ ಬೆಳಗ್ಗೆ 8:30ರ ಸುಮಾರು ತನ್ನ ಸಹೋದರನೊಂದಿಗೆ ಕೌಳೂರು ನದಿ ಪಾತ್ರಕ್ಕೆ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ. ನೀರು ಪೂರೈಕೆಯಾಗುತ್ತಿದ್ದ ಪೈಪ್‌ ಪುಟ್ವಾಲ್ವ್ ತರಲು ಹೋದ ವೇಳೆ ಏಕಾಏಕಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಗಿ ತಿಳಿದು ಬಂದಿದೆ.

ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ಮುನ್ನೆಚ್ಚರಿಕೆಯಾಗಿ ಟೊಂಕಕ್ಕೆ ಹಗ್ಗ ಕಟ್ಟಿಕೊಂಡೇ ನದಿ ಪಾತ್ರಕ್ಕೆ ತೆರಳಿದ್ದ, ನೀರಿನ ರಭಸ ಹೆಚ್ಚಾಗಿದ್ದರಿಂದ ಹಗ್ಗ ಹೊಟ್ಟೆ ಭಾಗಕ್ಕೆ ಬಿಗಿಯಾಗಿದ್ದು, ಅದನ್ನು ಬಿಡು ನಾನು ಈಜಿ ಬರುವೆ ಎಂದು ಹೇಳಿದ ವ್ಯಕ್ತಿ ಮೇಲೆ ಬಂದೇ ಇಲ್ಲ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಡಿವೈಎಸ್‌ಪಿ ಯು. ಶರಣಪ್ಪ, ಸಿಪಿಐ ಶರಣಗೌಡ ಎನ್‌., ಯಾದಗಿರಿ ಗ್ರಾಮೀಣ ಪೊಲೀಸ್‌ ಠಾಣೆ ಪಿಎಸ್‌ಐ ಈರಣ್ಣ ಮಗ್ಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಅಗ್ನಿ ಶಾಮಕ ದಳದಿಂದ ಶೋಧ ಕಾರ್ಯ: ಕೌಳೂರು ಬಳಿ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಯಾದಗಿರಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಹೆಚ್ಚುವರಿಯಾಗಿ ಸೈನ್ಯದ ರಕ್ಷಣಾ ತಂಡ ಹಾಗೂ ಜತೆಗೆ ಸ್ಥಳೀಯ ಮೀನುಗಾರರ ಸಹಾಯ ಪಡೆದು ಶೋಧ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next