Advertisement

ಪೇಪರ್‌ನಲ್ಲಿ ಆಹಾರ: ಆರೋಗ್ಯಕ್ಕೆ ಹಾನಿಕರ

07:50 PM Nov 28, 2019 | Naveen |

ಅನೀಲ ಬಸೂದೆ
ಯಾದಗಿರಿ:
ರಸ್ತೆ ಪಕ್ಕದ ಉಪಹಾರ ಕೇಂದ್ರ, ಹೋಟೆಲ್‌ ಗಳಲ್ಲಿ ಆಹಾರವನ್ನು ಪೇಪರ್‌ಗಳಲ್ಲಿ ನೀಡುತ್ತಿದ್ದರೂ ಇದನ್ನು ತಡೆಗಟ್ಟಬೇಕಿದ್ದ ಆಹಾರ ಸಂಸ್ಕರಣೆ ಮತ್ತು ಗುಣಮಟ್ಟ ಪ್ರಾಧಿಕಾರ ಮೌನ ವಹಿಸಿರುವುದು ಅದೆಷ್ಟೋ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ.

Advertisement

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪೇಪರ್‌ಗಳಲ್ಲಿ ತಿನ್ನುವ ಪದಾರ್ಥಗಳು ನೀಡುವುದು ನಿಷೇಧಿಸಿದ್ದರೂ ಜಿಲ್ಲಾ ಕೇಂದ್ರ ಸೇರಿದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಯಾರು ಕೇಳುವವರಿಲ್ಲದಂತಾಗಿದೆ. ಸಾರ್ವಜನಿಕರು ಸೇವಿಸುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆಗಿರುವ ಪ್ರತ್ಯೇಕ ಇಲಾಖೆ ನಿರ್ಲಕ್ಷ್ಯದಿಂದ ಜಿಲ್ಲಾದ್ಯಂತ ರಸ್ತೆ ಪಕ್ಕದ ಹೋಟೆಲ್‌, ಪಾನಿಪುರಿ ಬಂಡಿ, ಬೇಕರಿಗಳಲ್ಲಿ ಪೇಪರ್‌ನಲ್ಲಿ ತಿನ್ನುವ ಪದಾರ್ಥ ನೀಡುತ್ತಿದ್ದು, ಮುದ್ರಣಕ್ಕೆ ಬಳಸಿದ ಶಾಯಿ ಆಹಾರಕ್ಕೆ ಮೆತ್ತಿಕೊಂಡು ಸೇವಿಸಿದವರ ಹೊಟ್ಟೆ ಸೇರುವಂತಾಗಿದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನುತ್ತವೆ ವೈದ್ಯಕೀಯ ಮೂಲಗಳು.

ಇನ್ನೂ ಕಡಿಮೆ ದರದ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ಹೆಚ್ಚಾಗಿ ಕೆಮ್ಮು ಬರುವ ಸಾಧ್ಯತೆಗಳಿರುತ್ತವೆ. ಆಹಾರ ತಿನ್ನಲು ಯೋಗ್ಯವೋ ಇಲ್ಲವೋ ಎನ್ನುವುದರ ಗುಣಮಟ್ಟ ಪರಿಶೀಲಿಸಬೇಕಾದ ಅಧಿಕಾರಿಗಳ ಕಾರ್ಯ ಎಲ್ಲಿಯೂ ಕಾಣುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಪೇಪರ್‌ನಲ್ಲಿ ತಿನ್ನುವ ಪದಾರ್ಥಗಳನ್ನು ನೀಡಬಾರದು ಎಂದು ತಿಳಿವಳಿಕೆ ನೀಡುತ್ತೇವೆ. ನಮ್ಮೆದುರು ಕಂಡರೆ ಅದನ್ನು ತೆಗೆಸಲಾಗುತ್ತದೆ ಎನ್ನುವ ಸಮಜಾಯಿಸಿ ನೀಡುತ್ತಾರೆ.

ತಿನ್ನುವ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸುವುದು, ಸಾರ್ವಜನಿಕರ ಆರೋಗ್ಯ ಕಾಪಾಡುವುದು ಆಹಾರ ಸುರಕ್ಷತಾ ಅಧಿಕಾರಿ ಪ್ರಮುಖ ಕರ್ತವ್ಯ. ಆದರೆ ಇಲಾಖೆ ತನ್ನ ಕರ್ತವ್ಯ ಮರೆತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next