Advertisement

ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಸಂಕಷ್ಟ

03:29 PM Nov 20, 2019 | Naveen |

ಅನೀಲ ಬಸೂದೆ
ಯಾದಗಿರಿ
: ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಸೇವೆಗಳನ್ನು ತಳಮಟ್ಟದ ಗ್ರಾಮೀಣ ಕುಟುಂಬಗಳಿಗೆ ಒದಗಿಸಲು ಸಂಪರ್ಕ ಕೊಂಡಿಯಾಗಿರುವ ಆಶಾ ಕಾರ್ಯಕರ್ತೆರು ಕಳೆದ ಒಂದೂವರೆ ವರ್ಷದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಕೇಂದ್ರ ಸರ್ಕಾರ ನೀಡಬೆಕಿದ್ದ ಎಂಸಿಟಿಎಸ್‌ ಪ್ರೋತ್ಸಾಹ ಧನವಿಲ್ಲದೇ ರಾಜ್ಯದ ಅಂದಾಜು 41 ಸಾವಿರ ಆಶಾ ಕಾರ್ಯಕರ್ತೆಯರು ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯ ಖಾತೆ ಸಚಿವ ಶ್ರೀರಾಮುಲು ಸೇರಿದಂತೆ ಉನ್ನತ ಅಧಿಕಾರಿಗಳನ್ನು ನ. 8ರಂದು ಭೇಟಿಯಾಗಿರುವ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಿಯೋಗ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಚರ್ಚೆಸಿದೆ.

ಕಳೆದ 14 ತಿಂಗಳಿಂದ ಬಾಕಿಯಿರುವ ಎಂಸಿಟಿಎಸ್‌ ಸೇವೆಗಳ ಪ್ರೋತ್ಸಾಹಧನವನ್ನು ಒಂದೇ ಬಾರಿಗೆ ನೀಡಬೇಕು. ಇದೇ ನವೆಂಬರ್‌ ತಿಂಗಳಿಂದ ರಾಜ್ಯ ಮತ್ತು ಕೇಂದ್ರದ ನಾನ್‌ ಎಂಟಿಸಿಎಸ್‌ ಸೇರಿ ಪ್ರತಿ ತಿಂಗಳು ಒಂದೇ ಬಾರಿಗೆ 6 ಸಾವಿರ ರೂ. ಗೌರವಧನ ನೀಡಬೇಕು. ಆಶಾ ಸಾಫ್ಟ್‌ ಆರ್‌ಸಿಎಚ್‌ ಪೋರ್ಟಲ್‌ ಸರಳೀಕರಣ ಮಾಡಬೇಕು. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ-ಆಶಾಗಳ ಮಾರಣಾಂತಿಕ ಕಾಯಿಲೆ ಚಿಕಿತ್ಸೆಗೆ ಮತ್ತು ಕಳೆದ 5 ವರ್ಷದಿಂದ ಜುಲೈ 2019ರೊಳಗೆ ನಿದನರಾದ ಆಶಾ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಅಲ್ಲದೇ ಜೂನ್‌2019ರ ನಂತರದಲ್ಲಿ ಸಾವಿಗೀಡಾದ ಆಶಾ ಈಗಾಗಲೇ ವಿಮೆ ಮಾಡಿಸಿದ್ದಲ್ಲಿ ಆ ಕುಟುಂಬಕ್ಕೆ 3 ಲಕ್ಷ ರೂ. ವಿಮಾ ಸೌಲಭ್ಯ ಒದಗಿಸಬೇಕು. ಆಶಾ ಕಾರ್ಯಕರ್ತೆಯರಿಗೆ ದ್ವಿ-ಚಕ್ರ ವಾಹನ ಖರೀದಿಸಲು ಸಹಾಯಧನ ನೀಡಬೇಕು. ಪ್ರತಿ ವರ್ಷ ಆಶಾ ಕಾರ್ಯಕರ್ತೆಯರಿಗೆ 4 ಸಮವಸ್ತ್ರ
(ಸೀರೆಗಳು) ಒದಗಿಸಬೇಕು. 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿ ನಿವೃತ್ತಿ ಹೊಂದಲು ಬಯಸಿದ ಆಶಾಗೆ 20 ಸಾವಿರ ರೂ. ಪರಿಹಾರ ನೀಡುವುದು ಸೇರಿದಂತೆ ಗೌರವ ಧನ ಹೆಚ್ಚಿಸುವ ಕುರಿತು ಆರೋಗ್ಯ ಖಾತೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಚರ್ಚಿಸಲಾಗಿದೆ.

ಶೀಘ್ರವೇ ಭರವಸೆ ಈಡೇರುವ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಪ್ರೋತ್ಸಾಹ ಧನವೇ ನಿಂತು ಹೋಗಿದೆ. ಬರಬೇಕಿರುವ ಪ್ರೋತ್ಸಾಹಧನದ ನಿಖರ ಅಂಕಿಅಂಶ ಲಭ್ಯವಾಗಿಲ್ಲದಿದ್ದರೂ ತಲಾ 2 ಸಾವಿರದಿಂದ 3 ಸಾವಿರ ರೂ. ವರೆಗೆ ಬರಬೇಕಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಮಾಸಿಕ 3500 ರೂ. ತಿಂಗಳ ಗೌರವ ಧನ ನೀಡುತ್ತಿತ್ತು. ಈ ಹಿಂದೆ ಸಮ್ಮಿಶ್ರ ಸರ್ಕಾರ 500 ರೂ. ಹೆಚ್ಚಳ ಮಾಡಿತ್ತು. ನಾನ್‌ ಎಂಟಿಸಿಎಸ್‌ನ 2500 ರೂ. ಸಿಗುತ್ತದೆ. ಸದ್ಯ 4 ಸಾವಿರ ರೂ. ನೀಡುವ ಗೌರವ ಧನವನ್ನು 12 ಸಾವಿರಕ್ಕೆ ಏರಿಸಬೇಕು. 14 ತಿಂಗಳಿಂದ ಬಾಕಿ ಇರುವ ಎಂಪಿಟಿಎಸ್‌ ಪ್ರೋತ್ಸಾಹ ಧನ ತ್ವರಿತವಾಗಿ ದೊರೆಯುವಂತಾಗಬೇಕು ಎನ್ನುವುದು ಆಶಾಗಳ ಒತ್ತಾಯವಾಗಿದೆ. ಆಶಾ ಕಾರ್ಯಕರ್ತೆಯರ ವಿವಿಧ 34 ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಪಡೆಯಲು ಕೈಗೊಂಡ ಚಟುವಟಿಕೆ ಮಾಹಿತಿಯನ್ನು ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಇದನ್ನು ಮಾಡಿದರೆ ಮಾತ್ರ ಅವರ ಖಾತೆಗೆ ಹಣ ಸಂದಾಯವಾಗುತ್ತದೆ.

Advertisement

ತಳಮಟ್ಟದಲ್ಲಿ ಮಾಡಿರುವ ಚಟುವಟಿಕೆ ನಿಜವಿದ್ದರೂ ಅದು ದಾಖಲಾಗದಿದ್ದರೆ ಅವರಿಗೆ ಪ್ರೋತ್ಸಾಹದನವೇ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೆಬ್‌ನಲ್ಲಿ ತಾಂತ್ರಿಕ ದೋಷದಿಂದ ಮಾಹಿತಿ ಸರಿಯಾಗಿ ದಾಖಲಾಗದೇ ಒಬ್ಬರ ಚಟುವಟಿಕೆ ಇನ್ನೊಬ್ಬರ ಹೆಸರಿನಲ್ಲಿ ಅಪ್‌ಲೋಡ್‌ ಆಗುತ್ತಿದೆ.ಇದನ್ನು ಆರೋಗ್ಯ ಇಲಾಖೆ ಎಎನ್‌ಎಂ ಇಲ್ಲವೇ ಡಾಟಾ ಎಂಟ್ರಿ ಆಪರೇಟರ್‌ ಮಾಡಿದರೆ ಅನುಕೂಲವಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕಳೆದ 14 ತಿಂಗಳಿಂದ ಕೇಂದ್ರದ ಪ್ರೋತ್ಸಾಹಧನ ಬಾಕಿ ಇದೆ. ಒಟ್ಟಾರೆ ತಿಂಗಳಲ್ಲಿ ಮಾಡುವ ಎಲ್ಲ ಕೆಲಸಗಳಿಗೆ ಒಂದೇ ಬಾರಿ ಗೌರವ ಧನ ನೀಡದೇ 3-4 ಕಂತಲ್ಲಿ ಹಣ ಪಾವತಿಯಾಗುತ್ತಿದೆ. ರಾಜ್ಯದ ನಿಗದಿತ ಗೌರವಧನ ಬೇರೆ, ಕೇಂದ್ರದ ನಾನ್‌ ಎಂಸಿಟಿಎಸ್‌ ಪ್ರೋತ್ಸಾಹಧನ ಬೇರೆ, ಎಂಸಿಟಿಎಸ್‌ ಪ್ರೋತ್ಸಾಹಧನ ಬೇರೆ. ಹೀಗೆ ಯಾವುದೋ ಕಾಂಪೋನೆಂಟ್‌ನಲ್ಲಿ ಹಣ ಇಲ್ಲ ಎಂದರೆ ಅದು ಬೇರೆ. ಹೀಗೆ 3-4 ಕಂತು. ಅದು ಕೂಡ ಒಂದೇ ತಿಂಗಳಲ್ಲಿ ಸಿಗದೇ 2-6 ತಿಂಗಳವರೆಗೆ ಕೆಲವೊಮ್ಮೆ 1 ವರ್ಷವೂ ವಿಳಂಬವಾಗುತ್ತಿದೆ.

ಆರೋಗ್ಯ ಇಲಾಖೆ ಪ್ರತಿಯೊಂದು ಕಾರ್ಯಕ್ರಮ ಅನುಷ್ಠಾದಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರವಹಿಸುತ್ತಾರೆ. ಇವರಿಗೆ ನೀಡಬೇಕಿರುವ ಪ್ರೋತ್ಸಾಹಧನ ವಿತರಣೆಗೆ ವರ್ಷಗಳಾಗುತ್ತಿದೆ. ಹೀಗಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದು, ಆರೋಗ್ಯ ಖಾತೆ ಸಚಿವರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ವಿವರಿಸಲಾಗಿದೆ. ಸರ್ಕರ ಶೀಘ್ರವೇ ಸ್ಪಂದಿಸಬೇಕು.
ಕೆ. ಸೋಮಶೇಖರ, ರಾಜ್ಯ ಆಶಾ
ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next