ಯಾದಗಿರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳು ವಿದ್ಯಾರ್ಥಿ ಜೀವನವನ್ನು ನಿರ್ಧರಿಸಲಿವೆ. ಹಾಗಾಗಿ ವಿದ್ಯಾರ್ಥಿಗಳು ತಮಗೆ ದೊರೆತ ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಂಡಲ್ಲಿ ಯಶಸ್ಸು ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಕಾಂತ ಕರದಳ್ಳಿ ಹೇಳಿದರು.
ನಗರದ ರಾಚೋಟಿ ವೀರಣ್ಣ ಶಿಕ್ಷಣ ಸಂಸ್ಥೆಯ ಆರ್.ವಿ. ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಎಸ್‌ಎಸ್‌ಎಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿ ಉಚಿತ ವೈದ್ಯಕೀಯ ಮೆರಿಟ್ ಸೀಟು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಳೆಯುತ್ತಿರುವ ತಂತ್ರಜ್ಞಾನದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಮೊಬೈಲ ಕೂಡ ಸಾಕಷ್ಟು ಅನುಕೂಲವಾಗಿದೆ. ಪಠ್ಯದ ವಿಷಯಕ್ಕಿಂತ ಹೊರತಾಗಿಯೇ ವಿದ್ಯಾರ್ಥಿಗಳು ಜ್ಞಾನ ಪಡೆಯಬಹುದಾಗಿದೆ ಎಂದರು.
ಗೌರವ ಡಾಕ್ಟರೇಟ್ ಪುರಸ್ಕೃತ ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ತರಗತಿ ಎರಡು ವರ್ಷಗಳು ಜೀವನ ನಿರ್ಧಾರಕ ಘಟ್ಟವಿದ್ದಂತೆ. ಹಾಗಾಗಿ ಈ ಎರಡು ವರ್ಷ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ವ್ಯಾಸಾಂಗದಲ್ಲಿ ಮಗ್ನರಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಶಿಕ್ಷಣ ಪ್ರೇಮಿ ಎಸ್.ಎಸ್. ದೇವರಕಲ್ ಪ್ರಾಸ್ತಾವಿಕ ಮಾತನಾಡಿದರು. ಆರ್.ವಿ. ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಕಮಲಾ ಎನ್. ದೇವರಕಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೇಕಾರ್, ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರ ನೀಲಂಗಿ, ಬಸವರಾಜ ಚಾಮಾ, ಪ್ರಾಚಾರ್ಯ ಸುರೇಶ ಹವಲ್ದಾರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು, ಬಸವಂತ್ರಾಯ ಮಾಲಿಪಾಟೀಲ, ನಾಗೇಂದ್ರ ಜಾಜಿ, ಸುಭಾಷ ಆಯಾರಕರ್ ಇದ್ದರು.
ವಿದ್ಯಾರ್ಥಿನಿ ಕುಮಾರಿ ಅರ್ಪಿತಾ ರಾಣಿ ಪ್ರಾರ್ಥನೆ ಗೀತೆ ಹಾಡಿದರು. ಸಂತೋಷ ಕುಮಾರ ನಿರೂಪಿಸಿದರು. ಪ್ರಾಚಾರ್ಯ ವಿಕ್ರಮ ದೇಸಾಯಿ ವರದಿ ವಾಚಿಸಿದರು. ಉಪನ್ಯಾಸಕ ತಾಯಪ್ಪ ಪೂಜಾರಿ ಸ್ವಾಗತಿಸಿ, ವಂದಿಸಿದರು. ಕಾಲೇಜಿನ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಪುರಸ್ಕಾರ: ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಮೊದಲು ಮೂರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೊತೆಗೆ ನಗದು ಬಹುಮಾನ ವಿತರಿಸಲಾಯಿತು.
ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ್ದ ಸಂಸ್ಥೆಯ ಮಿಥಾಲಿ, ಪ್ರಿಯಾಂಕ, ಸ್ನೇಹಾ ಜಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಅವಿನಾಶ, ದೃಷ್ಟಿ, ಹರಿನಾಥ ಹಾಗೂ ರಾಹುಲ ಎಂ ಅವರನ್ನು ಪುರಸ್ಕರಿಸಲಾಯಿತು. ವಾಣಿಜ್ಯ ವಿಭಾಗದಲ್ಲಿ ಅಯ್ಯಪ್ಪಯ್ಯ, ವಿಶ್ವಾರಾಜ ಹಾಗೂ ನರಸಪ್ಪಗೆ ಸನ್ಮಾನಿಸಲಾಯಿತು.