ಯಾದಗಿರಿ: ರಾಷ್ಟ್ರದ ಮೂಲ ಸೌಕರ್ಯ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಅಪಾರವಾಗಿದೆ. ಪ್ರಸ್ತುತ ಆಧುನಿಕ ಜೀವನ ಶೈಲಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಜಗತ್ತಿನ ಜೀವನ ಮಟ್ಟವನ್ನು ಉನ್ನತಗೊಳಿಸುವಲ್ಲಿ ಇಂಜಿನಿಯರ್‌ಗಳ ಶ್ರಮ ಮುಖ್ಯವಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರು ಹೇಳಿದರು.
ನಗರದ ಚರ್ಚ ಹಾಲ್ನಲ್ಲಿ ಆರ್.ವಿ. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಆಚರಿಸಲಾಗುವ ಇಂಜಿನಿಯರ್ ಡೇ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಾದ ನಂತರ ಇಂಜಿನಿಯರ್ ಡೇ ಆಚರಣೆ ನಡೆಯುತ್ತದೆ ಎಂಬುದೇ ಗೊತ್ತಿಲ್ಲದಂತ ಸ್ಥಿತಿ ಇದ್ದಾಗ ಆರ್.ವಿ. ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಕಾರ್ಯಕ್ರಮ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ದಾಸವಾಳ ಮಠದ ಪೂಜ್ಯ ವೀರೇಶ್ವರ ಸ್ವಾಮೀಜಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಮಾಜದ ಇಂದಿನ ಜನಗತ್ತಿನಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಮಾದರಿಯ ಕಟ್ಟಡಗಳು ತಲೆ ಎತ್ತುತ್ತಿದ್ದು, ಆಧುನಿಕ ಜಗತ್ತು ಸರ್ವ ಸುಂದರವಾಗಲು ಇಂಜಿನಿಯರ್‌ಗಳ ಶ್ರಮ ಮತ್ತು ಕೊಡುಗೆ ಕಾರಣ. ಸರ್ ಎಂ. ವಿಶ್ವೇಶ್ವರಯ್ಯ ರಾಜ್ಯ ಕಂಡ ಶ್ರೇಷ್ಠ ಇಂಜಿನಿಯರ್ ಆಗಿದ್ದರು. ಅವರ ನೆನಪಿನಲ್ಲಿ ಈ ದಿನಾಚರಣೆ ಆಯೋಜಿಸಿರುವುದು ಮತ್ತು ಅವರ ಮಾರ್ಗದಲ್ಲಿ ಸಾಗುವ ಎಲ್ಲ ಇಂಜಿನಿಯರ್‌ಗಳಿಗೆ ಯಶಸ್ಸು ಲಭಿಸಲಿದೆ ಎಂದು ಆಶೀರ್ವಚನ ನೀಡಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಜಿಲ್ಲಾ ಸಂಚಾಲಕ ಪಿ. ವೇಣುಗೋಪಾಲ ಮಾತನಾಡಿ, ಇಂಜಿನಿಯರ್ ಡೇ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಿರುವ ಯುವ ಪಡೆಯ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್ ಮಾತನಾಡಿದರು. ಕಲಬುರಗಿ ಜಿಲ್ಲಾ ಪಂಚಾಯಿತಿ ಸದಸ್ಯ ದಿಲೀಪ್ ಆರ್. ಪಾಟೀಲ, ಜೆಡಿಎಸ್ ರಾಜ್ಯ ಮುಖಂಡ ಹನುಮೇಗೌಡ ಬೀರನಕಲ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದೂಧರ ಸಿನ್ನೂರು, ಡಾ| ಮಹೇಶರೆಡ್ಡಿ, ಸುರೇಶ ಅಲ್ಲಿಪುರ, ನಗರಸಭೆ ಸದಸ್ಯ ಚೆನ್ನಕೇಶವ ಬಾಣತಿಹಾಳ, ಡಿಎಸ್‌ಎಸ್ ಸಂಚಾಲಕ ನಾಗಣ್ಣ ಬಡಿಗೇರ ಇದ್ದರು. ಅಧ್ಯಕ್ಷತೆಯನ್ನು ಆರ್.ವಿ, ಸಿವಿಲ್ ಇಂಜಿನಿಯರ್ ರಾಜಕುಮಾರ ಗಣೇರ್ ವಹಿಸಿದ್ದರು. ಭಾಗ್ಯಶ್ರೀ ಪ್ರಾರ್ಥಿಸಿ ನಿರೂಪಿಸಿದರು. ಸಚಿನ್ ನಾಯಕ ಸ್ವಾಗತಿಸಿ ಕೊನೆಗೆ ವಂದಿಸಿದರು.