ಯಾದಗಿರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿರುವ ಗಡಿ ಜಿಲ್ಲೆ ಯಾದಗಿರಿ ಕಂದಾಯ ಇಲಾಖೆಯ ಭೂಮಿ ಯೋಜನೆಯಡಿ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವದಿನಗಳ ಸೃಜನೆ, ಸಕಾಲಿಕ ಕೂಲಿ ಪಾವತಿ, ಕಾಮಗಾರಿಗಳ ಪೂರ್ಣಗೊಳಿಸುವಿಕೆ, ಅನುಷ್ಠಾನ ಇಲಾಖೆಗಳ ಸಾಧನೆ, ಜಿಯೊ ಟ್ಯಾಗ್ ಮತ್ತು ಕೂಲಿ ಸಾಮಗ್ರಿ ವೆಚ್ಚದ ಅನುಪಾತ 40:60ರ ಗಡಿ ದಾಟದೆ ಇರುವ ಹಲವು ಮಾನದಂಡಗಳ ಆಧಾರದಲ್ಲಿ ಜಿಲ್ಲೆ ಎಲ್ಲ ಮಾನದಂಡ ಪಾಲಿಸಿರುವುದು ಮೌಲ್ಯ ಮಾಪನದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರು ಮನರೇಗಾ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲೆಗಳ ಮೌಲ್ಯಮಾಪನ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯು 90.30 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಅನಿರುದ್ಧ ಶ್ರವಣ ಅವರು ಸಾಧನೆಗೆ ಜಿಪಂ ಸಿಇಓ ಶಿಲ್ಪಾ ಶರ್ಮಾ ಅವರನ್ನು ಅಭಿನಂದಿಸಿದ್ದಾರೆ. ಭೂಮಿ ಯೋಜನೆಯಡಿ ಸಾರ್ವಜನಿಕರಿಂದ ಜಿಲ್ಲೆಯಲ್ಲಿ ಫೆಬ್ರವರಿ-2020ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ 7066 ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ 3.16 ಸಿಗ್ಮಾ ಮೌಲ್ಯ ಪಡೆದಿರುವುದರಿಂದ ವಿಲೇವಾರಿ ಸೂಚ್ಯಂಕದ ಪ್ರಕಾರ ಯಾದಗಿರಿ ಜಿಲ್ಲೆ ರಾಜ್ಯ ಮಟ್ಟದಲ್ಲಿ ಫೆಬ್ರವರಿ ಮಾಹೆಯಲ್ಲಿ ದ್ವೀತಿಯ ಸ್ಥಾನ ಪಡೆದಿದೆ. ಭೂಮಿ ಮತ್ತು ಯುಪಿಒಆರ್ ಪದನಿಮಿತ್ತ ನಿರ್ದೇಶಕರು ಹಾಗೂ ಭೂಮಾಪನ ಇಲಾಖೆ ಆಯುಕ್ತರು ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರಿಗೆ ಶ್ಲಾಘಿಸಿ ಅಭಿನಂದನಾ ಪತ್ರ ನೀಡಿದ್ದಾರೆ.
ಜಿಲ್ಲೆಯ ಎಲ್ಲ ತಹಶೀಲ್ದಾರ್ ಕಚೇರಿ ಒಳಗೊಂಡು ವಿವಿಧ ಭೂಮಿ ಸೇವೆಗಳನ್ನು ಸೇರಿ ಒಟ್ಟು 7066 ಅರ್ಜಿಗಳನ್ನು ನಿಗದಿತ ಕಾಲಾವಧಿಯಲ್ಲಿ ವಿಲೇಗೊಳಿಸಿ ರಾಜ್ಯ ಮಟ್ಟದಲ್ಲಿ 3.16 ಸಿಗ್ಮಾ ಮೌಲ್ಯ ಪಡೆದಿದೆ. 3.01702 ಅರ್ಜಿಗಳ ವಿಲೇವಾರಿ ಸೂಚ್ಯಂಕದ ಪ್ರಕಾರ ಸ್ವೀಕೃತವಾದ ಅರ್ಜಿಗಳನ್ನು ಶೀಘ್ರ ವಿಲೇ ಮಾಡಿ ಫೆಬ್ರವರಿ 2020ರ ಮಾಹೆಯಲ್ಲಿ ಯಾದಗಿರಿ ಜಿಲ್ಲೆ ರಾಜ್ಯ ಮಟ್ಟದಲ್ಲಿ ದ್ವೀತಿಯ ಸ್ಥಾನ ಪಡೆದಿರುವುದಕ್ಕೆ ಜಿಲ್ಲಾಧಿಕಾರಿಗಳು ಸಂತಸಗೊಂಡಿದ್ದಾರೆ.
ಇನ್ನು ಜಿಲ್ಲೆಯ ತಹಶೀಲ್ದಾರರು, ತಾಲೂಕು ಕಚೇರಿ ಅಧಿಕಾಳು, ಸಿಬ್ಬಂದಿ ಕಾರ್ಯ ಸಾಧನೆ ಕಾರಣವಾಗಿದೆ. ಅಲ್ಲದೇ ಜಿಲ್ಲಾಡಳಿತದ ಪರವಾಗಿ ಸಹಾಯಕ ಆಯುಕ್ತರು, ಜಿಲ್ಲೆಯ ಆಯಾ ತಾಲೂಕಿನ ಭೂಮಿ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಬಗ್ಗೆ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೂಡ ಇದೇ ರೀತಿ ಪ್ರಗತಿ ಸಾಧಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಬರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.