Advertisement

ಆನೆಕಾಲು ರೋಗ ಮುಕ್ತಜಿಲ್ಲೆಗೆ ಸಹಕರಿಸಿ: ಕಂದಕೂರ

07:42 PM Oct 21, 2019 | Naveen |

ಯಾದಗಿರಿ: ಆನೆಕಾಲು ರೋಗಮುಕ್ತ ಸಮಾಜಕ್ಕಾಗಿ ಜಿಲ್ಲಾದ್ಯಂತ ನವೆಂಬರ್‌ 4ರಿಂದ 22ರವರೆಗೆ ಸಾಮೂಹಿಕವಾಗಿ ಡಿಇಸಿ, ಅಲ್ಬೆಂಡಜೋಲ್‌ ಹಾಗೂ ಐವರ್‌ವೆುಕ್ಟಿನ್‌ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಮಾತ್ರೆಗಳ ಸೇವನೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ. ಹಾಗಾಗಿ ಭಯಪಡದೆ ಮಾತ್ರೆ ಸೇವಿಸಿ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಕಾಲು ರೋಗ ನಿಯಂತ್ರಣ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಯಾದಗಿರಿ, ಬೀದರ, ಕಲಬುರಗಿ ಜಿಲ್ಲೆಗಳಲ್ಲಿ ಆನೆಕಾಲು ರೋಗ ಹೆಚ್ಚು ಇದೆ. ಆನೆಕಾಲು ರೋಗಿಗಳಿಗೆ ಕಚ್ಚಿದ ಸೊಳ್ಳೆ ಬೇರೆಯವರಿಗೆ ಕಚ್ಚಿದರೆ ಈ ರೋಗ ಬರುವುದಿಲ್ಲ. ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳು ಈ ಮಾತ್ರೆಗಳನ್ನು ಸೇವಿಸಿದಾಗ ಮಾತ್ರ ಅವರ ರಕ್ತದಲ್ಲಿರುವ ಜಂತುಗಳು ನಾಶ ಹೊಂದುವುದರಿಂದ ಕೆಲವೊಮ್ಮೆ ಜ್ವರ, ತಲೆನೋವು, ಮೈ-ಕೈ ನೋವು, ವಾಂತಿ, ತಲೆ ಸುತ್ತುವಿಕೆ ಕಂಡು ಬರುತ್ತವೆ. ಇವು ತಾತ್ಕಾಲಿಕವಾಗಿದ್ದು, ಯಾವುದೇ ಚಿಕಿತ್ಸೆಯಿಲ್ಲದೆ ಒಂದು ದಿನದಲ್ಲಿ ಉಪಶಮನವಾಗುತ್ತವೆ ಎಂದು ಸ್ಪಷ್ಟ ಪಡಿಸಿದರು.

ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧಾಪ್ಯದಿಂದಿರುವವರು, ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಂಬಂಧಿ ದೀರ್ಘಾವ ಧಿ ಕಾಯಿಲೆಗಳಿಂದ ನರಳುತ್ತಿರುವವರು ಈ ಮಾತ್ರೆಗಳನ್ನು ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಮಾತ್ರೆ ತೆಗೆದುಕೊಳ್ಳಬಾರದು. ಆರೋಗ್ಯದಿಂದಿರುವ ಹಾಗೂ ಬಿಪಿ, ಸಕ್ಕರೆ ಕಾಯಿಲೆ ಇರುವ ರೋಗಿಗಳು ಸಹ ಮಾತ್ರೆಗಳನ್ನು ಸೇವಿಸಬೇಕು. ಡಿಇಸಿ ಮತ್ತು ಅಲೆºಂಡಜೋಲ್‌ ಗುಳಿಗೆಗಳು
ಅತ್ಯಂತ ಸುರಕ್ಷಿತವಾದ ಔಷ ಗಳಾಗಿದ್ದು, ಕಳೆದ 50 ವರ್ಷಗಳಿಂದ ವಿಶ್ವದಾದ್ಯಂತ ಉಪಯೋಗಿಸಲ್ಪಡುತ್ತಿವೆ. ಭಾರತ ದೇಶದಲ್ಲಿ ಆನೆಕಾಲು ರೋಗ ಹೆಚ್ಚಾಗಿರುವುದರಿಂದ ಇದೇ
ಮೊದಲ ಬಾರಿಗೆ 3 ವಿಧದ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ನಡೆಯುತ್ತಿದೆ. ಐವರ್‌ವೆುಕ್ಟಿನ್‌ ಒಂದು ಮಾತ್ರೆಯ ದರ 400 ರೂ. ಇದ್ದು, ರೋಗವನ್ನು ಸಂಪೂರ್ಣವಾಗಿ ಮತ್ತು ಶೀಘ್ರ ನಿರ್ಮೂಲನೆ ಮಾಡುವ ಉದ್ದೇಶದಿಂದ ವಿಶ್ವಸಂಸ್ಥೆಯು ಐವರ್‌ವೆುಕ್ಟಿನ್‌ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದೆ ಎಂದು ಅವರು ವಿವರಿಸಿದರು.

ಯಾರಿಗೆ ಎಷ್ಟು ಮಾತ್ರೆ: ಡಿಇಸಿ ಮತ್ತು ಚೀಪಬಹುದಾದ ಅಲ್ಬೆಂಡಜೋಲ್‌ ಮಾತ್ರೆಗಳನ್ನು ವಯಸ್ಸಿಗನುಗುಣವಾಗಿ ನೀಡಲಾಗುವುದು. ಎಲ್ಲಾ ವಯಸ್ಸಿನವರಿಗೂ ಅಲ್ಬೆಂಡಜೋಲ್‌ 400 ಎಂ.ಜಿ.ಯ ಒಂದು ಮಾತ್ರೆಯನ್ನು ಚೀಪಲು ಕೊಡಲಾಗುವುದು. ಡಿಇಸಿ ಮಾತ್ರೆಯನ್ನು 2ರಿಂದ 5 ವರ್ಷದೊಳಗಿನವರಿಗೆ 100 ಎಂ.ಜಿ ಒಂದು ಮಾತ್ರೆ, 6ರಿಂದ 14 ವರ್ಷದೊಳಗೆ 200 ಎಂ.ಜಿ.ಯ 2 ಮಾತ್ರೆ, 15 ವರ್ಷ ಮೇಲ್ಪಟ್ಟವರಿಗೆ 300 ಎಂ.ಜಿ.ಯ 3 ಮಾತ್ರೆಗಳನ್ನು ನುಂಗಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯ ಜನಸಂಖ್ಯೆ 14,10,986 ಇದ್ದು, ಇವರಲ್ಲಿ 12,98,107 ಐವರ್‌ವೆುಕ್ಟಿನ್‌, ಡಿಇಸಿ ಮಾತ್ರೆಗಳ ಸೇವನೆಗೆ ಅರ್ಹರಿದ್ದಾರೆ. ಜಿಲ್ಲೆಗೆ 35,27,465 ಡಿಇಸಿ ಮಾತ್ರೆ, 35,27,465 ಐವರ್‌ವೆುಕ್ಟಿನ್‌ ಮಾತ್ರೆ ಹಾಗೂ ಚೀಪಬಹುದಾದ 14,10,986 ಅಲ್ಬೆಂಡಜೋಲ್‌ ಮಾತ್ರೆಗಳು ಬೇಕು. 5ರಿಂದ 6 ವರ್ಷಗಳ ಕಾಲ ಪ್ರತಿಯೊಬ್ಬರೂ ಈ ಮಾತ್ರೆಗಳನ್ನು ಸೇವಿಸಿದಲ್ಲಿ ಮುಂದಿನ ಪೀಳಿಗೆಯವರು ಆನೆಕಾಲು ರೋಗದಿಂದ ಮುಕ್ತವಾಗುವುದರಲ್ಲಿ ಸಂದೇಹವಿಲ್ಲ. ಸಣ್ಣ-ಪುಟ್ಟ ತೊಂದರೆಗಳಿಗೆ ಹೆದರಿ ಈ ಮಾತ್ರೆ ಸೇವಿಸದಿದ್ದಲ್ಲಿ ಆನೆಕಾಲು ರೋಗ ನಿಯಂತ್ರಣ ಅಸಾಧ್ಯ.

Advertisement

ಆದ್ದರಿಂದ ಪ್ರತಿಯೊಬ್ಬರು ಸೇವಿಸಬೇಕು ಎಂದು ಅವರು ಮನವಿ ಮಾಡಿದರು. ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಭಗವಂತ ಅನವಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ನಾರಾಯಣಪ್ಪ, ಹಿರಿಯ ಆರೋಗ್ಯ ಸಹಾಯಕ ಪರಮರೆಡ್ಡಿ ಕಂದಕೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next