ಯಾದಗಿರಿ: ರಾಯಚೂರಿನ ಶಕ್ತಿನಗರ ವಿದ್ಯುತ್ ಶಾಖೋತ್ಪನ್ನ ಕೇಂದ್ರಕ್ಕೆ ನೀರು ಸಂಗ್ರಹಿಸುವ ಸೇತುವೆಯಿಂದ ಜಮೀನುಗಳಿಗೆ ಹಾನಿಯಾಗುತ್ತಿರುವುದನ್ನು ಮನಗಂಡ ಕರ್ನಾಟಕ ವಿದ್ಯುತ್ ನಿಗಮ ಜಿಲ್ಲೆಯ ವಡಗೇರಾ ತಾಲೂಕಿನ ಗುರ್ಜಾಪುರ-ಶಿವಪೂರ ಗ್ರಾಮಗಳ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಿದೆ.
ರೈತರಿಗೆ ಪದೇ ಪದೇ ಪರಿಹಾರ ನೀಡುವುದು ಅಸಾಧ್ಯ. ಹೀಗಾಗಿ ರೈತರ 60 ಎಕರೆ ಜಮೀನು ಖರೀದಿಸಲು ನಿರ್ಧರಿಸಿರುವುದಾಗಿ ಯಾದಗಿರಿ ಜಿಲ್ಲಾ ಧಿಕಾರಿಗಳಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಡಿ.23ರಂದು ಪತ್ರ ಬರೆದಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಯಾದಗಿರಿ ಸಹಾಯಕ ಆಯುಕ್ತ, ವಡಗೇರಾ ತಹಶೀಲ್ದಾರ್ ಹಾಗೂ ಆರ್‌ಟಿಪಿಎಸ್ ಅಧಿಕಾರಿಗಳು ಶಿವಪೂರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದಾರೆ.
ಸೇತುವೆ ಗೇಟ್ ತೆರೆದಿರುವುದರಿಂದ ನೀರು ಸಂಗ್ರಹಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಗೇಟ್ ಮುಚ್ಚಿ ನೀರು ಸಂಗ್ರಹಕ್ಕೆ ಅನುಕೂಲ ಮಾಡಿಕೊಡಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ. ಪರಿಹಾರ ವಿತರಿಸುವ ಕುರಿತು ಶೀಘ್ರವೇ ನಿರ್ಧರಿಸುವುದಾಗಿ ತಿಳಿಸಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶಾಖೋತ್ಪನ್ನ ಕೇಂದ್ರಕ್ಕಾಗಿ ನೀರು ಸಂಗ್ರಹಿಸುವ ಉದ್ದೇಶದಿಂದ ಕಳೆದ ಮೂರು ವರ್ಷದ ಹಿಂದೆ ಕೃಷ್ಣಾ ನದಿಗೆ ಗುರ್ಜಾಪುರದ 194 ಗೇಟ್‌ನ ಬೃಹತ್ ಸೇತುವೆ ನಿರ್ಮಿಸಿ ಬೇಸಿಗೆಯಲ್ಲಿ ನೀರು ಬಳಕೆಗೆ ಗೇಟ್ ಮುಚ್ಚಿ ನೀರು ಸಂಗ್ರಹಿಸಲಾಗುತ್ತಿದೆ. ಇದರಿಂದ ಗೋನಾಳ, ಶಿವಪೂರ ಗ್ರಾಮಗಳ 60 ಎಕರೆಯಷ್ಟು ಜಮೀನು ನಡುಗಡ್ಡೆಯಲ್ಲಿ
ಮುಳುಗಡೆಯಾಗಿ ರೈತರು ಬಿತ್ತಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳೆಗೆ ಪರಿಹಾರ ನೀಡಿ ಅಥವಾ ಜಮೀನು ಖರೀದಿಸಿ ಹಣ ನೀಡುವಂತೆ ಆಗ್ರಹಿಸಿ ಶಿವಪೂರ ರೈತರು ಕಳೆದ ಡಿ.9ರಿಂದ ಏಳು ದಿನ ಅಹೋರಾತ್ರಿ ಹೋರಾಟ ನಡೆಸಿದ್ದರು. ಶಾಸಕ ವೆಂಕಟರೆಡ್ಡಿ ಮುದ್ನಾಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ 15 ದಿನಗಳಲ್ಲಿ ಸೂಕ್ತ ಪರಿಹಾರಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದರು.