ಯಾದಗಿರಿ: ರಾಜ್ಯದ ರೈತರ ಸಮಸ್ಯೆಗಳ ಕುರಿತು ಗಮನ ಸೆಳೆಯಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿ ಪಾದಯಾತ್ರೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಗರದ ಜಿಲ್ಲಾ ರೈತ ಸಂಘದ ಕಾರ್ಯಾಲಯ ಉದ್ಘಾಟನೆ ಬಳಿಕ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜೂನ್ 21ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲು ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮಕ್ಕೆ ಬರುತ್ತಿದ್ದು, ಗುರುಮಠಕಲ್ನಿಂದ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡುವ ಗ್ರಾಮ ಚಂಡರಕಿಯವರೆಗೆ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಇದ್ದು, ದಿನಕ್ಕೆ ಕನಿಷ್ಠ 16ರಿಂದ 20 ತಾಸು ವಿದ್ಯುತ್ ಪೂರೈಕೆಯಾಗಬೇಕು. ಈ ಕುರಿತಾಗಿ ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಆದೇಶ ಹೊರಡಿಸಬೇಕು. ಜಿಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿಗಳೆರಡೂ ಹರಿದರೂ ಸಹ ಸರಿಯಾದ ನೀರಾವರಿ ವ್ಯವಸ್ಥೆ ಇಲ್ಲದಿರುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು.
ಸಾಲಮನ್ನಾ ಯೋಜನೆಯಲ್ಲಿ ಮನ್ನಾ ಆಗಿದ್ದ ರೈತರ ಹಣ ಮರಳಿ ಮತ್ತೆ ಸರ್ಕಾರಕ್ಕೆ ವಾಪಸ್ ಹೋಗಿದೆ. ಜಿಲ್ಲೆಯ ಸುಮಾರು 800 ಜನ ರೈತರಿಗೆ ಈ ಸಮಸ್ಯೆಯಾಗಿದ್ದು, ಕಳೆದ ಮುಂಗಾರು ಹಾಗೂ ಹಿಂಗಾರು ಬೆಳೆಯ ಬೆಳೆ ಪರಿಹಾರ ಸರಿಯಾಗಿ ಬಂದಿರುವುದಿಲ್ಲ. ಹಾಗೆಯೇ ಈ ಬಾರಿ ಮುಂಗಾರು ಬಂದರೂ ಸಹ ಬೆಳೆ ಪರಿಹಾರ ರೈತರಿಗೆ ತಲುಪಿಲ್ಲ. ಸರಿಯಾಗಿ ಮಳೆಯಾಗದೇ ಬರಗಾಲ ಬಿದ್ದು, ರೈತರು ಗುಳೆ ಹೊರಟಿದ್ದಾರೆ. ಆದ್ದರಿಂದ ಕೂಡಲೇ ಬರ ಪರಿಹಾರ ಘೋಷಿಸಬೇಕು ಎಂದರು. ಭೂ ಸ್ವಾಧೀನ ಕಾಯ್ದೆಯಡಿ ರೈತರಿಗೆ ನ್ಯಾಯ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತಿಗಳಿಗೆ ಒತ್ತಾಯ ಮಾಡಲಾಗುವುದು ಎಂದ ಅವರು, ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಘೋಷಿಸಿದರು.
ರೈತರ ಸಮಸ್ಯೆಗಳು ಬಗೆಹರಿದ ಬಳಿಕವೇ ಮುಖ್ಯಮಂತ್ರಿಗಳು ಗ್ರಾಮವಾಸ್ತವ್ಯ ಮಾಡಲು ಬಿಡುವುದು, ಇಲ್ಲದಿದ್ದರೇ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ ಪಡಿಸುವ ಕುರಿತು ನಿರ್ಣಯಿಸಲಾಯಿತು. ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ರಾಜ್ಯ ಸಂಚಾಲಕ ಸುಭಾಷ್ ಐಕೂರು ಹಾಗೂ ಜಿಲ್ಲಾಧ್ಯಕ್ಷ ಬಸನಗೌಡ ಚಿಂಚೋಳಿ ಸೇರಿದಂತೆ ನಾನಾ ಜಿಲ್ಲೆಯ ರೈತ ಮುಖಂಡರು ಸಭೆಯಲ್ಲಿ ಇದ್ದರು.