Advertisement

ಪ್ರವಾಹ ಸಂತ್ರಸ್ತರಿಗಾಗಿ ಅಗತ್ಯಕ್ಕನುಗುಣ ಗಂಜಿ ಕೇಂದ್ರ ಸ್ಥಾಪನೆ

04:48 PM Aug 08, 2019 | Naveen |

ಯಾದಗಿರಿ: ನಾರಾಯಣಪುರ ಜಲಾಶಯದಿಂದ 4 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚು ನೀರು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಅಗತ್ಯಕ್ಕನುಗುಣ ಗಂಜಿ ಕೇಂದ್ರಗಳನ್ನು ಆರಂಭಿಸಿ ಸಂತ್ರಸ್ತರಿಗೆ ಊಟ, ಕುಡಿಯುವ ನೀರು, ಶೌಚಾಲಯ ಹಾಗೂ ಇನ್ನಿತರೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಮಾತನಾಡಿದ ಅವರು, ಸುರಪುರ ತಾಲೂಕಿನ ಪ್ರವಾಹ ಪೀಡಿತ ದಾದ್ಲಾಪುರ ಸರಕಾರಿ ಪ್ರೌಢಶಾಲೆ, ದೇವಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುರಪುರ ಎಪಿಎಂಸಿ ರೈತ ಭವನ, ಬೆಂಚಿಗಡ್ಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ.

ಹುಣಸಗಿ ತಾಲೂಕಿನ ಪ್ರವಾಹ ಪೀಡಿತ ಜುಮಾಲಪುರ ಜನರಿಗಾಗಿ ಅಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಶಹಾಪುರ ತಾಲ್ಲೂಕಿನ ಪ್ರವಾಹ ಪೀಡಿತ ಜನರಿಗೆ ಗೌಡೂರು ಶಾಲೆ, ಕೊಳ್ಳೂರು (ಎಂ) ಗ್ರಾಮ ಪಂಚಾಯಿತಿ ಉಗ್ರಾಣ ಕಟ್ಟಡದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ವಡಗೇರಾ ತಾಲ್ಲೂಕಿನ ಪ್ರವಾಹ ಪೀಡಿತರಿಗೆ ವಡಗೇರಾ ಸರಕಾರಿ ಪ್ರೌಢ ಶಾಲೆ, ಹೈಯಾಳ (ಬಿ) ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಗಂಜಿ ಕೇಂದ್ರಗಳಿಗೆ ನೇಮಿಸಿರುವ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ಮೇಲ್ವಿಚಾರಣೆ ನೋಡಲ್ ಅಧಿಕಾರಿಗಳು ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಗಂಜಿ ಕೇಂದ್ರಗಳಲ್ಲಿ ತಯಾರಿಸಲಾದ ಆಹಾರದ ಗುಣಮಟ್ಟವನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಪ್ರತಿದಿನ ತಪಾಸಣೆಗೆ ಒಳಪಡಿಸತಕ್ಕದ್ದು ಎಂದು ಸೂಚಿಸಿದರು.

2 ಗೋಶಾಲೆ ಸ್ಥಾಪನೆ: ಜಾನುವಾರುಗಳ ರಕ್ಷಣೆಗಾಗಿ ಜಿಲ್ಲೆಯಲ್ಲಿ 2 ಗೋಶಾಲೆಗಳನ್ನು ತೆರೆಯಲಾಗಿದೆ. ಸುರಪುರ ತಾಲೂಕಿನ ಶೆಳ್ಳಗಿ, ಮುಷ್ಟಳ್ಳಿ, ನೀಲಕಂಠರಾಯನಗಡ್ಡಿ, ತಿಂಥಣಿ ಗ್ರಾಮಗಳ ಜಾನುವಾರುಗಳಿಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸುರಪುರದ ಎಪಿಎಂಸಿಯಲ್ಲಿ ಗೋಶಾಲೆ ಸ್ಥಾಪಿಸಲಾಗಿದೆ. ವಡಗೇರಾ ತಾಲೂಕಿನ ಹೈಯಾಳ (ಬಿ), ಗೊಂದೆನೂರು, ಕೊಂಕಲ್, ಬೆಂಡೆಬೆಂಬಳಿ, ತುಮಕೂರು ಗ್ರಾಮಗಳ ಜಾನುವಾರುಗಳಿಗಾಗಿ ವಡಗೇರಾ ತಹಶೀಲ್ದಾರ್‌ ಕಚೇರಿ ಎದುರುಗಡೆಯ ರೈಲ್ವೆ ವೈರ್‌ಲೆಸ್‌ ಕೇಂದ್ರದಲ್ಲಿ ಗೋಶಾಲೆ ತೆರೆಯಲಾಗಿದೆ. ಅವಶ್ಯವಿದ್ದಲ್ಲಿ ಜಾನುವಾರುಗಳನ್ನು ಸ್ಥಳಾಂತರಿಸಿ ಮೇವು, ಕುಡಿಯುವ ನೀರು ವ್ಯವಸ್ಥೆ ಮಾಡಲು ತಿಳಿಸಿದರು.

ನದಿಪಾತ್ರದ ಗ್ರಾಮಗಳಲ್ಲಿರುವ ಶಾಲೆ ಮತ್ತು ಅಂಗನವಾಡಿಗಳಿಗೆ ಪರಿಸ್ಥಿತಿಗನುಗುಣವಾಗಿ ರಜೆ ಘೋಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಅವರಿಗೆ ಸೂಚಿಸಿದರು.

Advertisement

ಜನರ ಅನುಕೂಲಕ್ಕಾಗಿ ತೆರೆದಿರುವ ಕಂಟ್ರೋಲ್ ರೂಮ್‌ ದೂ: 08473-253771 ಹಾಗೂ ಪೊಲೀಸ್‌ ಕಂಟ್ರೋಲ್ ರೂಮ್‌ ಸಂಖ್ಯೆ 100ಗೆ ಕರೆ ಮಾಡಬಹುದು. ಆಯಾ ತಾಲೂಕಿನ ತಹಶೀಲ್ದಾರ್‌ರ ಮೊಬೈಲ್ ಸಂ. ಸುರಪುರ 9901112994, ಶಹಾಪುರ 9901301385, ಹುಣಸಗಿ 9449943022, ವಡಗೇರಾ 9731493636, ಯಾದಗಿರಿ 9845612361 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next