Advertisement

ವೈದ್ಯ ಕಾಲೇಜಿಗೆ ಬಂದ್‌ ಚಿಕಿತ್ಸೆ!

11:04 AM Jul 11, 2019 | Naveen |

ಯಾದಗಿರಿ: ಹಿಂದುಳಿದ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಲೇಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನೇತೃತ್ವದಲ್ಲಿ ಕರೆ ನೀಡಿದ್ದ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

Advertisement

ಜಿಲ್ಲಾ ಕೇಂದ್ರ ಬಂದ್‌ ಆಚರಿಸುವ ಕುರಿತು ಒಂದು ದಿನ ಮುಂಚಿತವಾಗಿಯೇ ಸಾರ್ವಜನಿಕವಾಗಿ ಆಟೋದಲ್ಲಿ ಪ್ರಚಾರ ಮಾಡಲಾಗಿತ್ತು. ಬಂದ್‌ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳೆಲ್ಲ ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿದ್ದು ಕಂಡು ಬಂತು.

ಬೆಳಗ್ಗೆ 6ರಿಂದ 8ರವರೆಗೆ ಹಾಲು ಸೇರಿದಂತೆ ಇತರೆ ದಿನನಿತ್ಯದ ಉಪಯುಕ್ತ ವಸ್ತುಗಳು ಕೆಲಗಂಟೆಗಳ ಕಾಲ ಸಾರ್ವಜನಿಕರಿಗೆ ದೊರೆತಿದ್ದು, ಹೊತರು ಪಡಿಸಿ ಮಧ್ಯಾಹ್ನ 3:00 ಗಂಟೆವರೆಗೂ ಕುಡಿಯಲು ಹನಿ ನೀರು ಸಿಗಲಿಲ್ಲ. ಇದರಿಂದಾಗಿ ದೂರದ ಊರುಗಳಿಂದ ಬಂದಿದ್ದ ಜನರು ಚಹಾ, ನೀರು ಸಿಗದೇ ಪರಿತಪಿಸುವಂತಾಯಿತು. ಬಹುತೇಕ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು. ಸರ್ಕಾರಿ ಕಚೇರಿಗಳು, ಬ್ಯಾಂಕ್‌, ಆಸ್ಪತ್ರೆ, ಔಷಧ ಅಂಗಡಿ, ಅಂಚೆ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಇನ್ನು ಬೇರೆ ಊರುಗಳಿಂದ ನಗರಕ್ಕೆ ಬಂದು ರೈಲು ಮಾರ್ಗವಾಗಿ ಮುಂಬೈ, ಪುಣೆಗೆ ತೆರಳಬೇಕಿದ್ದ ಗ್ರಾಮೀಣ ಜನರು ಬಂದ ಕುರಿತು ಅರಿಯದೇ ಬಸ್‌ ನಿಲ್ದಾಣದಲ್ಲಿ ಬಸ್‌ ಇಳಿಯುತ್ತಿದ್ದಂತೆ ಶಾಕ್‌ ತಟ್ಟಿತು. ಮೆಡಿಕಲ್ ಕಾಲೇಜಿಗಾಗಿ ಜಿಲ್ಲಾ ಕೇಂದ್ರ ಬಂದ್‌ ಮಾಡಲಾಗಿದೆ. ಆಟೋಗಳು ಸಿಗಲ್ಲ ಎನ್ನುವುದು ಖಾತರಿ ಪಡಿಸಿಕೊಂಡ ಪ್ರಯಾಣಿಕರು ತಮ್ಮ ಕೈಚೀಲ ಹೊತ್ತುಕೊಂಡು ರೈಲ್ವೆ ನಿಲ್ದಾಣದತ್ತ ತೆರಳಿದರು.

ನಗರದ ಮೈಲಾಪೂರ ಬೇಸ್‌ದಿಂದ ಚಕ್ಕರಕಟ್ಟಾ ಮಾರ್ಗವಾಗಿ ಗಾಂಧಿ ವೃತ್ತಕ್ಕೆ ತಲುಪಿ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ನಗರಸಭೆ ಕಾರ್ಯಾಲಯ ಆವರಣದಲ್ಲಿ ಜಮಾಯಿಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದರು.

Advertisement

ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಡಾ| ಎ.ಬಿ. ಮಾಲಕರೆಡ್ಡಿ, ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳು ಮೆಡಿಕಲ್ ಕಾಲೇಜಿನಿಂದ ನಿಮಗೇನು ಉಪಯೋಗವಿಲ್ಲ. ಎಲ್ಲಾ ಬೇರೆಯವರು ಬಂದು ಓದುತ್ತಾರೆ ಎಂದು ಹೇಳಿರುವುದನ್ನು ಖಂಡಿಸಿದರು. ರಾಜ್ಯದ ಮುಖ್ಯಮಂತ್ರಿ ಅಭಿವೃದ್ಧಿಯ ಚಿಂತನೆ ನಡೆಸಬೇಕು. ಸಿಎಂ ಜಿಲ್ಲೆಗೆ ಒಂದು ನ್ಯಾಯ ನಮಗೊಂದು ನ್ಯಾಯನಾ ಎಂದು ಪ್ರಶ್ನಿಸಿದರು. ಹಿಂದುಳಿದ ಭಾಗದ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್‌ ಓದಬಾರದಾ ಎಂದು ಮುಖ್ಯಮಂತ್ರಿಗಳ ತಾರತಮ್ಯ ನೀತಿ ಖಂಡಿಸಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಜಿಲ್ಲೆಗೆ ಮೆಡಿಕಲ್ ಕಾಲೇಜು ಬರುವುದರಿಂದ ಈ ಭಾಗದ ಬಡ ಮಕ್ಕಳು ಉನ್ನತ ವ್ಯಾಸಾಂಗ ಮಾಡುವುದರ ಜೊತೆಗೆ ಜಿಲ್ಲೆಯ ಆರ್ಥಿಕ ಸ್ಥಿತಿಗಿತಿಯೂ ಪರೋಕ್ಷವಾಗಿ ಸಹಕಾರಿಯಾಗಲಿದೆ. ಜಿಲ್ಲೆಯ ಜನರು ಸೂಕ್ತ ಆರೋಗ್ಯ ಸೌಕರ್ಯಗಳು ಸಿಗದೇ ಕಲಬುರಗಿ, ರಾಯಚೂರುಗೆ ಚಿಕಿತ್ಸೆಗೆ ತೆರಳಬೇಕಿದೆ. ವೈದ್ಯಕೀಯ ಕಾಲೇಜು ಆರಂಭಿಸಿದರೆ ಎಲ್ಲಾ ಸೌಕರ್ಯಗಳು ಈ ಭಾಗದ ಜನರಿಗೆ ಇಲ್ಲಿಯೇ ದೊರೆಯಲಿದೆ. ನಮ್ಮ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ಮೆಡಿಕಲ್ ಕಾಲೇಜು ಘೋಷಣೆಯವರೆಗೆ ಹೋರಾಟ ನಿಲ್ಲಲ್ಲ ಎಂದರು. ಹೋರಾಟಕ್ಕೆ ಜಿಲ್ಲಾ ಕೇಂದ್ರವಲ್ಲದೇ ತಾಲೂಕುಗಳಿಂದಲೂ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು. ಈ ವೇಳೆ ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜಪ್ಪ ಪಾಟೀಲ ಕ್ಯಾತನಾಳ, ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌. ಪಾಟೀಲ ನರಬೋಳಿ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ಮಾತನಾಡಿದರು.

ಸಂಚಾರ ವ್ಯತ್ಯಯ: ಬಂದ್‌ ಮಾಹಿತಿ ಅರಿಯದ ಗ್ರಾಮೀಣ ಭಾಗದ ಜನರು ಆಸ್ಪತ್ರೆ, ಸರ್ಕಾರಿ ಕಚೇರಿ ಕೆಲಸಕ್ಕೆ ಆಗಮಿಸಿದವರು ನಗರಕ್ಕೆ ಬಂದು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.

ತಮ್ಮ ಗ್ರಾಮಗಳಿಂದ ನಗರಕ್ಕೆ ಖಾಸಗಿ ವಾಹನಗಳ ಮೂಲಕ ಬಂದಿಳಿದ ಜನರಿಗೆ ನಗರದಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸಲು ನಗರದ ಸಾರಿಗೆ ವ್ಯವಸ್ಥೆ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೊಂದರೆಗೀಡಾಗುವಂತಾಯಿತು. ಇನ್ನೂ ಬೆರಣೆಳಿಕೆಯಷ್ಟು ಆಟೋಗಳು ಓಡಾಡುತ್ತಿದ್ದವು. ಆದರೇ ಇದರ ಮಧ್ಯೆಯೇ ಜನರು ಅನಿವಾರ್ಯವಾಗಿ ನಡೆದುಕೊಂಡು ತೆರಳಿಯೇ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next