ಯಾದಗಿರಿ: ಗಡಿ ಜಿಲ್ಲೆ ಯಾದಗಿರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಇಲ್ಲದಿದ್ದರೂ ಅನಾನುಕೂಲಗಳ ಮಧ್ಯೆಯೇ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನಿಯಮಿತ ಶಾಖೆಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರಿಗೆ ಜೀವಾಳವಾಗಿವೆ.
Advertisement
ಈ ಹಿಂದೆ ಕಲಬುರಗಿ ಅಖಂಡ ಜಿಲ್ಲೆಯಾಗಿದ್ದ ಸಂದರ್ಭದಿಂದಲೂ ಕಲಬುರಗಿ ಕೇಂದ್ರಲ್ಲಿಯೇ ಇರುವ ಡಿಸಿಸಿ ಬ್ಯಾಂಕ್ ಯಾದಗಿರಿ ಜಿಲ್ಲೆಯಾಗಿ 10 ವರ್ಷ ಕಳೆದರೂ ತನ್ನ ಕೇಂದ್ರ ಕಚೇರಿ ಆರಂಭಿಸಿಲ್ಲ. ಹಾಗಾಗಿ ವ್ಯವಹಾರದ ದೃಷ್ಟಿಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾ ಕೇಂದ್ರದಲ್ಲಿ ಡಿಸಿಸಿ ಬ್ಯಾಂಕ್ ತೆರೆಯುವ ಬೇಡಿಕೆ ಬಹುವರ್ಷಗಳಿಂದಲೂ ಇದೆ. ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿಗತಿ ನೆಲಕಚ್ಚಿದ್ದು, ಜಿಲ್ಲೆಯಲ್ಲಿ ಯಾವುದೇ ಸಹಕಾರಿ ಕಾರ್ಖಾನೆಗಳಿಲ್ಲ. ಕೇವಲ ರೈತರಿಗೆ ಸಾಲ ಸೌಲಭ್ಯ, ಠೇವಣಿ ಸಂಗ್ರಹ, ಆಭರಣ ಸಾಲ, ವ್ಯಾಪಾರ ಅಭಿವೃದ್ಧಿಗೆ ಸಾಲ, ವಾಹನ ಸಾಲದಂತ ಸೌಕರ್ಯಗಳು ಜನರಿಗೆ ಸಿಗುತ್ತಿದೆ. ಕಳೆದೆರಡು ವರ್ಷಗಳಿಂದ ಸ್ತ್ರೀ ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲ ಸೌಲಭ್ಯ ನೀಡುವುದನ್ನು ನಿಲ್ಲಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
Related Articles
Advertisement
ಯಾದಗಿರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2018-19ನೇ ಸಾಲಿನಲ್ಲಿ 10 ಲಕ್ಷ ರೂ. ಲಾಭಗಳಿಸುವ ಮೂಲಕ ಗ್ರಾಮೀಣ ಸಹಕಾರಿಗಳಲ್ಲಿ ಮಾದರಿ ಎನಿಸಿದೆ. ಸಂಘದಿಂದ 494 ರೈತರಿಗೆ 1 ಕೋಟಿಗೂ ಅಧಿಕ ಬೆಳೆಸಾಲ ನೀಡಲಾಗಿತ್ತು. ಅದರಲ್ಲಿ ಹೊಸದಾಗಿ ಸಾಲ ಪಡೆದ ರೈತರ 15 ಲಕ್ಷ ರೂ. ಸಾಲ ಮನ್ನಾವಾಗಿದೆ. ವ್ಯಾಪಾರ ಅಭಿವೃದ್ಧಿ ಯೋಜನೆಯಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ 1 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಸಂಘದಲ್ಲಿ ರೈತರು 15 ಲಕ್ಷ ಮುದ್ದತ್ ಠೇವಣಿ ಹಣ ಇಟ್ಟಿದ್ದಾರೆ. ಜಿಲ್ಲೆಯಲ್ಲಿಯೇ ಉತ್ತಮ ಆರ್ಥಿಕ ಪ್ರಗತಿ ಕಾಣುವ ಸಂಘ ಎಂದು ಖ್ಯಾತಿಗಳಿಸಿದೆ. ಸಂಘದಲ್ಲಿ ಸ್ವಸಹಾಯ 108 ಸಂಘಗಳು ಆರ್ಥಿಕ ವ್ಯವಹಾರ ಮಾಡುತ್ತಿರುವುದರಿಂದ ಸಂಘದ ಪ್ರಗತಿಗೆ ಸಹಕಾರಿಯಾಗಿದೆ.