Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

05:30 PM Nov 17, 2019 | |

ಯಾದಗಿರಿ: ನಿರಂತರ 24 ವರ್ಷಗಳಿಂದಲೂ ನಾಡಿನ ಮಠಾಧೀಶರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ಪ್ರೇಮಿಗಳು ಖಾಸಗಿ ಶಾಲಾ-
ಕಾಲೇಜು ಆರಂಭಿಸಿ ಪ್ರತಿಭೆಗಳನ್ನು ನೀಡುವ ಮೂಲಕ ಮಾತೃಭಾಷೆ ಬೆಳವಣಿಗೆಗೆ ಕಾರಣವಾಗಿದ್ದು, ಸರ್ಕಾರ ಸಂಸ್ಥೆಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ನೌಕರರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಗುರುಮಠಕಲ್‌ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸರ್ಕಾರ 1995 ನಂತರ ಪ್ರಾರಂಭವಾದ ಅನುದಾನರಹಿತ ಶಾಲಾ-ಕಾಲೇಜುಗಳಿಗೆ ವೇತನ ಅನುದಾನ ವಿಸ್ತರಣೆ ಮಾಡಲು ಸರ್ಕಾರ ಮಲತಾಯಿ ಧೋರಣೆ ತೋರುತ್ತಿದ್ದು, ಹಿಂದಿನ ಸರ್ಕಾರಗಳು 1987ರಿಂದ 1993ರ ವರೆಗೆ 1600 ಶಾಲಾ-ಕಾಲೇಜುಗಳಿಗೆ ಅನುದಾನ ನೀಡಿತ್ತು. ನಂತರ ಸರಕಾರ 1993ರಿಂದ 1995ರ ವರೆಗೆ 848 ಶಾಲಾ-ಕಾಲೇಜುಗಳಿಗೆ ಅನುದಾನ ನೀಡಿತ್ತು.

1995ರಲ್ಲಿ ಪ್ರಾರಂಭಗೊಂಡ ಶಾಲಾ-ಕಾಲೇಜುಗಳಿಗೆ ಅನುದಾನ ವಿಸ್ತರಣೆ ಮಾಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಾರತಮ್ಯ ಧೋರಣೆ ಕುರಿತು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸಿ ನೌಕರರ ಹಿತ ಕಾಪಾಡಲು ಪುನಃ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ಸಂಘ ಒತ್ತಾಯಿಸಿದೆ.

ಅಲ್ಲದೇ ಸಂವಿಧಾನದ ಕಲಂ 371(ಜೆ)ಯಡಿ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ವೇತನಾನುದಾನ ಮತ್ತು ಮೂಲ ಸೌಕರ್ಯ ಒದಗಿಸುವುದು, ಕಾಲ್ಪನಿಕ ವೇತನ ಬಡ್ತಿ ಜಾರಿ ಮಾಡುವುದು ಮತ್ತು ಖಾಲಿ ಹುದ್ದೆ ಭರ್ತಿ ಮಾಡುವುದು ಹಾಗೂ ಈಗಿರುವ ಶಿಕ್ಷಕರ ಮತ್ತು ಮಕ್ಕಳ ಅನುಪಾತ 1:50ರಿಂದ 1:40ಗೆ ಇಳಿಸಿ ಆರ್‌ಟಿಇ ಪುನಃ ಆರಂಭಿಸುವ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Advertisement

ಈ ವೇಳೆ ಜಿಲ್ಲಾಧ್ಯಕ್ಷ ವಿಜಯ ರಾಥೋಡ್‌, ಪ್ರಧಾನ ಕಾರ್ಯದರ್ಶಿ ಪಿ.ಆರ್‌.ಗುಡಿಮನಿ, ಸಾಯಿಬಣ್ಣ ಬಸವಂತಪುರ, ಪರಮೇಶ್ವರಪ್ಪ, ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next