ಯಾದಗಿರಿ: ರೈತರಿಗೆ ಅನುಕೂಲವಾಗುವಂತೆ ಕೃಷಿ ಹೆಚ್ಚು ಲಾಭದಾಯಕವಾಗಲು ಸಮಗ್ರ ಕೃಷಿ ಮಾಹಿತಿ ನೀಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಬಿ. ಪಾಟೀಲ ಹೇಳಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವ ಸಮಗ್ರ ಕೃಷಿ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಉತ್ಪನ್ನ ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ರೈತರು ಮುಂದಾಗಬೇಕು. ಇದರಿಂದ ಹೆಚ್ಚಿನ ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ಇಲಾಖೆ ರೈತರಿಗೆ ಪೂರಕ ಮಾಹಿತಿ ತಲುಪಿಸಬೇಕು ಎಂದು ಹೇಳಿದರು. ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ಸಮಗ್ರ ಕೃಷಿ ಅಭಿಯಾನ ಜೂನ್ 15ರಿಂದ 18ರ ವರೆಗೆ ಒಟ್ಟು ಒಂಬತ್ತು ಕೃಷಿ ಮಾಹಿತಿ ವಾಹನಗಳ ಮೂಲಕ ನಡೆಯಲಿದೆ. ವಾಹನಗಳು ಶಹಾಪುರ ತಾಲೂಕಿನ ಶಹಾಪುರ, ದೋರನಹಳ್ಳಿ, ಗೋಗಿ ವಡಗೇರಾ, ಹೈಯಾಳ, ಸುರಪುರ ತಾಲೂಕಿನ ಸುರಪುರ, ಕೆಂಭಾವಿ, ಹುಣಸಗಿ, ಕಕ್ಕೇರಾ, ಕೊಡೆಕಲ್ ಹಾಗೂ ಯಾದಗಿರಿ ತಾಲೂಕಿನ ಯಾದಗಿರಿ, ಕೊಂಕಲ್, ಸೈದಾಪುರ, ಹತ್ತಿಕುಣಿ ಮತ್ತು ಗುರುಮಿಠಕಲ್, ಬಳಿಚಕ್ರ ಗ್ರಾಮಗಳಲ್ಲಿ ಸಂಚರಿಸಲಿವೆ. ಅಭಿಯಾನದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಮುಂಗಾರು ಹಂಗಾಮಿನಲ್ಲಿ ಬರುವ ಪ್ರಮುಖ ಬೆಳೆಗಳು, ಬೆಳೆಗಳಿಗೆ ತಗುಲುವ ರೋಗಗಳು, ಕೀಟಗಳ ನಿಯಂತ್ರಿಸುವ ಕ್ರಮಗಳು ಹಾಗೂ ಸಮಗ್ರ ಬೇಸಾಯ ಪದ್ಧತಿ ಕುರಿತು ರೈತರಿಗೆ ಮಾಹಿತಿ ನೀಡುವರು. ಜೂನ್ 18ರಂದು ಆಯಾ ತಾಲೂಕಿನ ಹೋಬಳಿ ಮಟ್ಟದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿ ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ನಾಗನಗೌಡ ಕಂದಕೂರ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಶರಣಬಸಪ್ಪಗೌಡ ದರ್ಶನಾಪುರ, ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಕಲಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಕೃಷಿ ಇಲಾಖೆ ಉಪ ನಿರ್ದೇಶಕಿ ಅನುಸೂಯಾ ಹೂಗಾರ, ಕೃಷಿ ತಾಂತ್ರಿಕ ಅಧಿಕಾರಿಗಳಾದ ಸುರೇಶ, ರಾಜಕುಮಾರ ಹಾಗೂ ಜಿಪಂ ಸದಸ್ಯರು, ರೈತ ಸಂಘದ ಮುಖಂಡರು, ಅಧಿಕಾರಿಗಳು ಇದ್ದರು.