Advertisement

ಹತ್ತಿ ಹೊಲದಲ್ಲಿ ಗಾಂಜಾ ಇಳುವರಿ

12:23 PM Nov 23, 2019 | Naveen |

„ಅನೀಲ ಬಸೂದೆ
ಯಾದಗಿರಿ:
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಹೊಲದಲ್ಲಿ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದೊಂದು ಅಪರಾಧ ಎನ್ನುವುದನ್ನು ಗೊತ್ತಿದ್ದರೂ ಗಾಂಜಾ ಬೆಳೆಯುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.

Advertisement

ಜಿಲ್ಲೆಯಲ್ಲಿ 2018-19ರಲ್ಲಿ ಶಹಾಪುರ ವ್ಯಾಪ್ತಿಯಲ್ಲಿ 3 ಗಾಂಜಾ ಪ್ರಕರಣಗಳು ದಾಖಲಾಗಿದ್ದವು. ಪ್ರಸಕ್ತ ಸಾಲಿನ ನವೆಂಬರ್‌ ನಲ್ಲಿಯೇ ನಾಲ್ಕು ಗಾಂಜಾ ಬೆಳದ ಪ್ರಕರಣಗಳು ಪತ್ತೆಯಾಗಿವೆ. ಶಹಾಪುರ ತಾಲೂಕು ಶಿರವಾಳ ಸೀಮಾಂತರದಲ್ಲಿ
ಭೀಮರಾಯನಗುಡಿ ಠಾಣೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ 32 ಕೆಜಿ ತೂಕದ 96 ಸಾವಿರ ರೂ. ಅಂದಾಜಿನ 120 ಹಸಿ ಗಾಂಜಾ ಗಿಡ ವಶಕ್ಕೆ ಪಡೆದು ಆರೋಪಿ ಮುನಿಸ್ವಾಮಿಯನ್ನು ಬಂಧಿಸಿದ್ದಾರೆ. ಶಹಾಪುರ ತಾಲೂಕು ದೋರನಹಳ್ಳಿಯಲ್ಲಿ ಹತ್ತಿ ಬೆಳೆಯಲ್ಲಿ ಗಾಂಜಾ ಬೆಳೆದಿದ್ದ ದೇವಿಂದ್ರಪ್ಪನನ್ನು ಬಂಧಿಸಿ 1.80 ಲಕ್ಷ ಬೆಲೆ ಬಾಳುವ 35 ಕೆಜಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಲಾಗಿದೆ. ಗುರುಮಠಕಲ್‌ ತಾಲೂಕು ಗಾಜರಕೋಟ್‌ ಮತ್ತು ಶಿವಪುರದಲ್ಲಿ ಎರಡು ಕಡೆ ಅಬಕಾರಿ ದಾಳಿ ನಡೆಸಿ 3 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆ ಜಪ್ತಿ ಮಾಡಲಾಗಿದೆ.

ಗಾಜರಕೋಟನ ಶಿವಲಿಂಗಪ್ಪಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಒಟ್ಟು 236 ಗಾಂಜಾ ಗಿಡಗಳು (25 ಕೆಜಿ.) ಮತ್ತು ಶಿವಪುರದ ನರಸಯ್ಯ ಕಲಾಲಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಒಟ್ಟು 35 ಗಾಂಜಾ ಗಿಡಗಳುನ್ನು (25 ಕೆಜಿ) ಜಪ್ತಿ ಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಡಾ| ಮಹಾದೇವಿ ಬಾಯಿ ನೇತೃತ್ವದ ತಂಡ ದಾಳಿ ನಡೆಸಿ 2 ಪ್ರಕರಣ ದಾಖಲಿಸಿದೆ. ಶಹಾಪುರ ವ್ಯಾಪ್ತಿಯಲ್ಲಿ 1 ಅಬಕಾರಿ ಪೊಲೀಸರು ದಾಳಿ ನಡೆಸಿದ್ದರೆ ಇನ್ನೊಂದೆಡೆ ಪೊಲೀಸ್‌ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1 ಪ್ರಕರಣ ದಾಖಲಿಸಿ ಲಕ್ಷಾಂತರ ರೂ. ಮೊತ್ತದ ಗಾಂಜಾ ಕಚ್ಚಾ ಬೆಳೆ ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ತೊಗರಿ, ಹತ್ತಿ, ಕಬ್ಬು ಸೇರಿ ಯಾರಿಗೂ ಕಾಣದ ದೂರದ ಸ್ಥಳಗಳಲ್ಲಿ ಗಾಂಜಾ ಬೆಳೆಯುವುದು ಕಂಡು ಬರುತ್ತಿದೆ. ಕಾನೂನಿನಲ್ಲಿ ನಾರ್ಕೋಟಿಕ್‌ ಡ್ರಗ್ಸ್‌ ಮತ್ತು ಸೈಕೋಟ್ರೋಪಿಕ್‌ ಸಬ್ಸಟೆನ್ಸಸ್‌ ಕಾಯ್ದೆ 1985ರ ಪ್ರಕಾರ ಗಾಂಜಾ ಬೆಳೆಯುವುದು, ಅದಕ್ಕೆ ಪ್ರೇರೇಪಿಸುವುದು, ಇರಿಸಿಕೊಳ್ಳುವುದೂ ಅಪರಾಧವಾಗಿದೆ. ತಾವು ಅಡಮಾನಕ್ಕೆ ನೀಡಿದ ಜಮೀನಿನಲ್ಲಿ ಬೇರೆಯವರು ಬೆಳೆದರೂ ಅದಕ್ಕೆ ಮೂಲ ಜಮೀನು ಮಾಲೀಕನೇ ಹೊಣೆಗಾರನಾಗುತ್ತಾನೆ. ಹಾಗಾಗಿ ಜಮೀನು ಅಡಮಾನಕ್ಕೆ ನೀಡಿರುವ ರೈತರು ಎಚ್ಚರಿಕೆ ವಹಿಸಬೇಕಿದೆ. ಅಕ್ರಮ ಗಾಂಜಾ ಪ್ರಕರಣ ಜಾಮೀನು ರಹಿತ ಅಪರಾಧವಾಗಿದ್ದು, ಎನ್‌ಡಿಪಿಎಸ್‌ ಕಾಯ್ದೆ ಪ್ರಕಾರ ಆರೋಪಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಜತೆಗೆ 1 ಲಕ್ಷ ರೂಪಾಯಿಗೂ ಹೆಚ್ಚು ದಂಡ ವಿಧಿಸುವ ಅವಕಾಶವಿದೆ. ಹಾಗಾಗಿ ರೈತರು ಸಾಕಷ್ಟು ಎಚ್ಚರಿಕೆ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next