Advertisement

ಹೆಚ್ಚುವರಿ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ತಡೆಗೆ ಆಗ್ರಹ

03:07 PM Jul 03, 2019 | Naveen |

ಯಾದಗಿರಿ: ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಿ ಹೆಚ್ಚುವರಿ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪಟ್ಟಿ ಅವೈಜ್ಞಾನಿಕವಾಗಿ ತಯಾರಿಸಿ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಂದೋಲನ ನಡೆಯುತ್ತಿದೆ. ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ತಯಾರಿಸಿ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆಗೊಳಿಸಿದ್ದಾರೆ. ಅಲ್ಲದೇ ವರ್ಗಾವಣೆಯ ಕೌನ್ಸೆಲಿಂಗ್‌ ದಿನಾಂಕದ ಬಗ್ಗೆ ಯಾವ ಶಿಕ್ಷಕರ ಗಮನಕ್ಕೂ ತಾರದೇ ಕೇವಲ ವ್ಯಾಟ್ಸಾಪ್‌ ಮೂಲಕ ಸಂದೇಶ ಕಳುಹಿಸಲಾಗಿದೆ ಎಂದು ಆರೋಪಿಸಿದರು.

ವಯೋ ನಿವೃತ್ತಿಯಿಂದ ಖಾಲಿಯಾಗುವ ಶಿಕ್ಷಕರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಬೇಕು. ಈಗಾಗಲೇ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗ ಮಟ್ಟದಲ್ಲಿ 400 ಜನ ಶಿಕ್ಷಕರಿಗೆ ಮುಖ್ಯಗುರು ಎಂದು ಮುಂಬಡ್ತಿ ಕೊಡಲಾಗುತ್ತಿದ್ದು, ಅವರು ವರ್ಗಾವಣೆಗೊಂಡಲ್ಲಿ ಜಿಲ್ಲೆಯಲ್ಲಿ ಮತ್ತೇ ಶಿಕ್ಷಕರ ಸಮಸ್ಯೆ ತಲೆದೋರಲಿದೆ. ಹೀಗಾಗಿ ಇದೀಗ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸದೆ ಬೇರಿ ಜಿಲ್ಲೆಗಳಿಂದ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆಯಾಗಿ ಬಂದ ನಂತರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಮೊದಲೇ ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕೊರತೆ ಇದ್ದು, ಈ ವೇಳೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಿರುವುದರ ಹಿಂದಿನ ಮರ್ಮವೇನು ಎಂಬುದು ತಿಳಿಯುತ್ತಿಲ್ಲ. ಕೂಡಲೇ ಶಿಕ್ಷಕರ ವರ್ಗಾವಣೆ ತಡೆ ಹಿಡಿಯಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಿಂದ ಡಿಡಿಪಿಐ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next