Advertisement

ತಡೆಗೋಡೆ ತೆರವುಗೊಳಿಸಿದ ನಗರಸಭೆ

04:56 PM Mar 02, 2020 | Naveen |

ಯಾದಗಿರಿ: ನಗರದ ಸ.ನಂ.393 ವ್ಯಾಪ್ತಿಯ ದೋಖಾ ಶಾಲೆ ಹತ್ತಿರ ಕೆಲವರು ಸಾರ್ವಜನಿಕ ಸ್ಥಳ, ರಸ್ತೆ ಅತಿಕ್ರಮಣ ಮಾಡಿ ನಿರ್ಮಿಸಿದ್ದ ಗೋಡೆಯನ್ನು ನಗರಸಭೆ ಅಧಿಕಾರಿಗಳು ಕೊನೆಗೂ ತೆರವುಗೊಳಿಸಿದರು.

Advertisement

ನಗರಾಭಿವೃದ್ಧಿ ಪ್ರಾಧಿಕಾರದ ನಕ್ಷೆ ಪ್ರಕಾರ ಬಸವೇಶ್ವರ ನಗರದ ಬಡಾವಣೆ ನಕ್ಷೆಯಲ್ಲಿ ಸ.ನಂ 393ರ ಸಾರ್ವಜನಿಕ ಸ್ಥಳ, ಕಾಲುದಾರಿಯನ್ನು ಅತಿಕ್ರಮಣ ಮಾಡಿ ತಡೆಗೋಡೆ ನಿರ್ಮಿಸಿ ಸಾರ್ವಜನಿಕರು ಮತ್ತು ಶಾಲೆ ಮಕ್ಕಳಿಗೆ ಪ್ರತಿದಿನ ಪರದಾಡುವ ಸ್ಥಿತಿ ಸೃಷ್ಟಿಯಾಗಿತ್ತು. ಎರಡು ಸರ್ವೇ ನಂಬರ್‌ ಸುತ್ತಲೂ ಸುಮಾರು 10 ಅಡಿಗಳಷ್ಟು ಜಾಗ ಅತಿಕ್ರಮಣ ಮಾಡಿ ಕಾಂಪೌಂಡ್‌ ಗೋಡೆ ನಿರ್ಮಿಸಿ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದ ಆ ಮಾರ್ಗವಾಗಿ ಹೋಗುವ ಶಾಲಾ ಮಕ್ಕಳಿಗೆ, ಮಂದಿರಕ್ಕೆ ಹೋಗಲು ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದರು. ಅಷ್ಟೇ ಅಲ್ಲದೇ 2006ರಲ್ಲಿ ನಗರಸಭೆಯಿಂದ ಕೊಳವೆ ಬಾವಿ ಕೊರೆಸಿ ಅದಕ್ಕೆ ಹ್ಯಾಂಡ್‌ ಪಂಪ್‌ ಕೂಡ ಅಳವಡಿಸಿದ್ದರು. ಕೊಳವೆಬಾವಿ ಮುಚ್ಚಿ ಹಾಕಿ ಆ ಸ್ಥಳದಲ್ಲಿ ಕಾಂಪೌಂಡ್‌ ಗೋಡೆ ನಿರ್ಮಿಸಿ ಕೊಂಡಿರುವ ಕುರಿತು ಜಿಲ್ಲಾಡಳಿತ, ನಗರಸಭೆಗೆ ದೂರು ನೀಡಲಾಗಿತ್ತು. ಜಿಲ್ಲಾಡಳಿತದ ಆದೇಶದ ಮೇರೆಗೆ ನಗರಸಭೆ ಅಧಿಕಾರಿಗಳು ಅತಿಕ್ರಮಣ ಗೋಡೆ ತೆರವುಗೊಳಿಸಿ ಸಾರ್ವಜನಿಕರು ಹಾಗೂ ಶಾಲೆ ಮಕ್ಕಳಿಗೆ, ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಸ್ಥಳದಲ್ಲಿ ಸಾರ್ವಜನಿಕರ ಜಾಗ ಗುರುತಿಸಿ ನಾಮಫಲಕ ಹಾಕಬೇಕು. ಇನ್ನೂ ಕೆಲವರು ಈ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದು, ಮನೆ ಕಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಾಖಲೆ ಪತ್ರ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಕೆ.ಮುದ್ನಾಳ ಒತ್ತಾಯಿಸಿದ್ದಾರೆ. ನಗರದಲ್ಲಿ ಇಂತಹ ಅತಿಕ್ರಮಣವಾಗಿರುವ ಉದ್ಯಾನ, ಸಾರ್ವಜನಿಕ ಸ್ಥಳ, ರಸ್ತೆಗಳ ಕುರಿತು ಜಿಲ್ಲಾಡಳಿತ ತನಿಖೆ ನಡೆಸಲು ತಂಡ ರಚಿಸಬೇಕು. ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಕೂಡಲೇ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next