Advertisement

ವಿವಿಧೆಡೆ ಅಪ್ಪಣ್ಣ ಜಯಂತಿ ಸಂಭ್ರಮ

10:57 AM Jul 17, 2019 | Naveen |

ಯಾದಗಿರಿ: ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಭವಿಷ್ಯವನ್ನು ಉಜ್ವಲಗೊಳಿಸಲು ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಹೇಳಿದರು.

Advertisement

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಮಕ್ಕಳ ಪಾಲನೆ-ಪೋಷಣೆ ಮಾಡುವುದು ಪೋಷಕರ ಕರ್ತವ್ಯವಾಗಿದೆ. ಒಂದು ಕುಟುಂಬ ಸುಶಿಕ್ಷಿತವಾಗಿರಲು ಕುಟುಂಬದಲ್ಲಿ ಒಬ್ಬರಾದರೂ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ವಚನ ಸಾಹಿತ್ಯವು ನಮ್ಮ ನಿತ್ಯ ಜೀವನದ ಬೆಳಕಾಗಿದೆ. 12ನೇ ಶತಮಾನವು ಇತಿಹಾಸದಲ್ಲಿ ಶಾಶ್ವತವಾಗಿರುವ ಕಾಲವಾಗಿದೆ. ಅಂದಿನ ಶಿವಶರಣರು ವಚನಗಳನ್ನು ಸರಳವಾಗಿ ಸಾಮಾನ್ಯ ಜನರಿಗೆ ತಿಳಿಯುವಂತೆ ರಚಿಸುವ ಮೂಲಕ ಅಂದಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ತಿದ್ದುವ ಕೆಲಸ ಮಾಡಿದರು. ಹೀಗಾಗಿ ಅವರ ವಚನಗಳು ಇಂದಿಗೂ ಪ್ರಸ್ತುತವಾಗಿ ಎಂದು ಹೇಳಿದರು.

ಗುಂಡಗುರ್ತಿ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಕಳಸಪ್ಪ ವಡಗೇರಾ ಉಪನ್ಯಾಸ ನೀಡಿ, ಕ್ರಿ.ಶ. 1134ರಲ್ಲಿ ಬಿಜಾಪುರ ಜಿಲ್ಲೆಯ ವೀರಬಸಪ್ಪ ಮತ್ತು ದೇವಮ್ಮನವರ ಮಗನಾಗಿ ಜನಿಸಿದ ಅಪ್ಪಣ್ಣನವರು ಅನುಭವ ಮಂಟಪದ ಮೇಲುಸ್ತುವಾರಿಯಾಗಿ ಹಾಗೂ ಬಸವಣ್ಣನವರ ಕಾಯಕಕ್ಕೆ ಆಧಾರ ಸ್ತಂಭವಾಗಿದ್ದರು ಎಂದರು.

Advertisement

ನಗರಸಭೆಯ ಪೌರಾಯುಕ್ತ ರಮೇಶ ಸುಣಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಸಮಾಜದ ಜಿಲ್ಲಾಧ್ಯಕ್ಷ ಅಯ್ಯಣ್ಣ ಇಬ್ರಾಹಿಂಪುರ ಉಪಸ್ಥಿತರಿದ್ದರು.

ಸಮಾಜದ ಮುಖಂಡರು, ಮಹಿಳೆಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಸುಭಾಷ ವೃತ್ತದಿಂದ ಜಿಲ್ಲಾಡಳಿದ ಭವನದವರೆಗೆ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next