Advertisement
ಜಿಲ್ಲೆಯಲ್ಲಿ ಈಗಾಗಲೇ ಪ್ರೌಢಶಾಲೆ ಶಿಕ್ಷಕರ ಕೊರತೆ ಇದೆ. ಮಂಜೂರಾಗಿರುವ ಒಟ್ಟು 1279 ಹುದ್ದೆಗಳಲ್ಲಿ ಸದ್ಯ 1026 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರೆ, 253 ಹುದ್ದೆಗಳು ಖಾಲಿ ಉಳಿದಿವೆ. ಈ ಮಧ್ಯೆಯೇ 43 ಹೆಚ್ಚುವರಿ ಶಿಕ್ಷಕರ ವರ್ಗವಾಗಿರುವುದು ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ಪರಿಣಾಮ ಬೀರಲಿದೆ. ಮಾತ್ರವಲ್ಲದೇ ಪ್ರತಿ ಬಾರಿಯೂ ಜಿಲ್ಲೆಯ ಎಸ್‌ಎಸ್‌ಎಲ್ಸಿ ಫಲಿತಾಂಶ ಕುಸಿಯುತ್ತಿರುವುದು ಒಂದೆಡೆಯಾದರೇ ಶಿಕ್ಷಕರ ವರ್ಗಾವಣೆಯಿಂದ ಮತ್ತಷ್ಟು ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
Related Articles
Advertisement
ಜಿಪಂ ಅಧ್ಯಕ್ಷರ ಸೂಚನೆ: ಜಿಲ್ಲೆಯಲ್ಲಿನ ಹೆಚ್ಚುವರಿ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಮೊದಲೇ ಶಿಕ್ಷಕರ ಕೊರತೆಯಿಂದ ಜಿಲ್ಲೆಯಲ್ಲಿ ಫಲಿತಾಂಶ ಮಟ್ಟ ಸುಧಾರಣೆಯಾಗುತ್ತಿಲ್ಲ. ಈ ಬಗ್ಗೆ ಇಲಾಖೆಗೆ ಪತ್ರ ಬರೆದು ವರ್ಗಾವಣೆಯಾಗಿರುವ ಹೆಚ್ಚುವರಿ ಶಿಕ್ಷಕರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉನಿರ್ದೇಶಕರಿಗೆ ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ ಇತ್ತೀಚೆಗೆ ನಡೆದ ಸಭೆಯಲ್ಲಿ ಸೂಚಿಸಿದ್ದರು. ಸಭೆಗೆ ಮಾಹಿತಿ ನೀಡಿದ್ದ ಡಿಡಿಪಿಐ ಶಿಕ್ಷಕರನ್ನು ಉಳಿಸಿಕೊಳ್ಳಲು ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಮಾಹಿತಿ ನೀಡಿದ್ದರು. ಆದರೆ ಶಿಕ್ಷಕರನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಯಲಿಲ್ಲವೇ ಎಂಬ ಪ್ರಶ್ನೆ ಅಂತರ್ ಜಿಲ್ಲೆಗೆ ವರ್ಗವಾಗಿರುವ ಶಿಕ್ಷಕರನ್ನು ಕಾಡುತ್ತಿದೆ. ವರ್ಗಾವಣೆಯಾದ ಹೆಚ್ಚುವರಿ ಶಿಕ್ಷಕರನ್ನು ಅತಿ ಅವಶ್ಯವಿರುವ ಮೂಲ ಶಾಲೆಗಳಲ್ಲಿ ಮುಂದುವರಿಸಲು ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲ ಉಪನಿರ್ದೇಶಕರಿಗೆ ಸೂಚಿಸಿದ್ದರು. ಜಿಲ್ಲೆಯಿಂದ ವರ್ಗವಾಗಿ ಬೇರೆ ಜಿಲ್ಲೆಗೆ ತೆರಳುತ್ತಿರುವ ಹೆಚ್ಚವರಿ ಶಿಕ್ಷಕರನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವಾಗಿಲ್ಲ ಎಂದು ಶಿಕ್ಷಕರಿಂದಲೇ ಮೇಲಾಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ, ಮುಖ್ಯಗುರುಗಳಿಗೆ ತಿಳಿಸಲಾಗಿತ್ತು. ಜುಲೈ 24ರ ವರೆಗೆ ಕೊನೆ ದಿನವಾಗಿತ್ತು. ಕೆಲವರು ಪ್ರಸ್ತಾವನೆ ಸಲ್ಲಿಸಿದ್ದು, ಇಲಾಖೆಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಉಪನಿರ್ದೇಶಕರ ದ್ವಂದ್ವ ನೀತಿ?: ಒಂದೆಡೆ ಶಿಕ್ಷಕರನ್ನು ಇಲ್ಲಿಯೇ ಉಳಿಸಿಕೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ಜಿಪಂ ಅಧ್ಯಕ್ಷರಿಗೆ ಹೇಳುತ್ತಾರೆ. ಮತ್ತೂಂದೆಡೆ ವರ್ಗವಾಗಿರುವ ಹೆಚ್ಚುವರಿ ಶಿಕ್ಷಕರನ್ನು ಬಿಡುಗಡೆ ಮಾಡುವಂತೆ ಶಾಲಾ ಮುಖ್ಯಸ್ಥರಿಗೆ ಆದೇಶ ನೀಡಿದ್ದು, ಹಾಗಾಗಿ ಇಲ್ಲಿ ಉಪನಿರ್ದೇಶಕರೇ ಏನಾದರೂ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆಯೂ ಉಬ್ಧವಗೊಂಡಿದ್ದು, ಇದಕ್ಕೆ ಉಪನಿರ್ದೇಶಕರೇ ಉತ್ತರ ನೀಡಬೇಕಿದೆ.
ಶಿಕ್ಷಕರ ಬಿಡುಗಡೆಗೆ ಅಪರ ಆಯುಕ್ತರ ಪತ್ರ: ಶಿಕ್ಷಕರ ವರ್ಗಾವಣೆಯಿಂದ ಜಿಲ್ಲೆಯ ಶಿಕ್ಷಣ ಮಟ್ಟ ಕುಸಿಯುವ ಭೀತಿ ಎದುರಿಸುತ್ತಿದ್ದರೆ, ಅತ್ತ ಶಿಕ್ಷಣ ಇಲಾಖೆ ಅಪರ ಆಯುಕ್ತರು ಡಿಡಿಪಿಐಗೆ ಪತ್ರ ಬರೆದು ವರ್ಗಾವಣೆಯಾದ ಹೆಚ್ಚುವರಿ ಶಿಕ್ಷಕರನ್ನು ಬಿಡುಗಡೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಜುಲೈ 25ರಂದು ಸೂಚನೆ ನೀಡಿರುವ ಅವರು, ವರ್ಗಾವಣೆಯಾದ ಶಿಕ್ಷಕರು ತಮ್ಮನ್ನು ಬಿಡುಗಡೆಗೊಳಿಸುತ್ತಿಲ್ಲ ಎಂದು ಕೆಲವರು ಅಪರ ಆಯುಕ್ತರ ಮೊರೆ ಹೋಗಿದ್ದು, ಹಾಗಾಗಿ ಬಿಡುಗಡೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಏನಿದು ಹೆಚ್ಚುವರಿ ಶಿಕ್ಷಕರ ಗೊಂದಲ?ಒಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ 1 ಹುದ್ದೆ ಇರಬೇಕು. ಈಗಾಗಲೇ ಆ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚಿರುವ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಲಾಗಿದೆ. ಅವರನ್ನೇ ಬೇರೆಡೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಕೆಲವು ಶಾಲೆಗಳಲ್ಲಿ ಈ ಹಿಂದೆಯಿಲ್ಲದ ಹುದ್ದೆಗಳು ಮಂಜೂರಾಗಿ ಅನುಕೂಲವಾಗಿದ್ದು, ಇನ್ನೂ ಕೆಲವು ಕಡೆ ಇರುವ ಶಿಕ್ಷಕರು ವರ್ಗವಾಗಿದ್ದು, ಒಬ್ಬರ ಮೇಲೆಯೇ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಹೊರೆ ಬಿದ್ದಂತಾಗಿದೆ. ಇನ್ನೊಂದೆಡೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಿಂದ ನಷ್ಟವೇನಲ್ಲ ಲಾಭವೇ ಆಗಿದೆ. ಶಾಲೆಗಳಲ್ಲಿ ಈ ಮೊದಲು ಹುದ್ದೆ ಇರದ ಇಂಗ್ಲಿಷ್, ಪಿಸಿಎಂ, ಕನ್ನಡ ಹಾಗೂ ಗಣಿತ ಭಾಷಾ ಶಿಕ್ಷಕರ ಹುದ್ದೆಗಳು ಎಲ್ಲ ಶಾಲೆಗಳಲ್ಲಿ ಮಂಜೂರಾಗಿವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎನ್ನುತ್ತಾರೆ ಮೇಲಾಧಿಕಾರಿಗಳು. ಪ್ರಸಕ್ತ ಸಾಲಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಾಗಿದೆ. ವರ್ಗಾವಣೆಯಾದ ಕಲಾ ಶಿಕ್ಷಕರೇ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ವಿಷಯ ಬೋಧಿಸುತ್ತಿರುವುದು ಅನುಕೂಲವಾಗಿತ್ತು. ಭಾಷಾ ಶಿಕ್ಷಕರು ಬರೆವವರೆಗೂ ಹೆಚ್ಚುವರಿ ಶಿಕ್ಷಕರನ್ನು ಮುಂದುವರಿಸಲು ಈಗಾಗಲೇ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
•ಶ್ರೀಶೈಲ ಬಿರಾದಾರ,
ಡಿಡಿಪಿಐ ಯಾದಗಿರಿ