Advertisement

ಜಿಲ್ಲೆಯಲ್ಲಿ ನೆರೆಗೆ 26.16 ಕೋಟಿ ಹಾನಿ

11:01 AM Aug 17, 2019 | Team Udayavani |

ಯಾದಗಿರಿ: ಜಲಾಶಯಗಳಿಂದ ಹೆಚ್ಚುವರಿ ಯಾದ ನೀರು ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಬಿಟ್ಟಿರುವುದರಿಂದ ಜಿಲ್ಲೆಯ ಹಾನಿಗೊಳಗಾದ ನದಿ ಪಾತ್ರದ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೀದ್‌ ಅಖ್ತರ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪ್ರವಾಹದಿಂದಾಗಿ ನದಿಪಾತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಹಾಗಾಗಿ, ಅಗತ್ಯ ಔಷಧಗಳನ್ನು ಸಂಗ್ರಹಿಸಿ, ನದಿಪಾತ್ರದ ಗ್ರಾಮಗಳಲ್ಲಿನ ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಪ್ರವಾಹ ಕಡಿಮೆಯಾದ ನಂತರ ಪ್ರವಾಹ ಪೀಡಿತ ಹಳ್ಳಿಗಳಿಗೆ ಭೇಟಿ ನೀಡಿ, ಆರೋಗ್ಯ ಶಿಬಿರ ನಡೆಸಬೇಕು. ಕುಡಿಯುವ ನೀರಿನಿಂದ ಉಂಟಾಗುವ ಚರ್ಮ ರೋಗಗಳ ಬಗ್ಗೆ ಗಮನ ಹರಿಸಬೇಕು ಎಂದು ನಿರ್ದೇಶಿಸಿದರು.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು. ಅದೇ ರೀತಿ ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರವಾಹ ತಗ್ಗಿದ ನಂತರ ವಿದ್ಯುತ್‌ ಪರಿವರ್ತಕಗಳನ್ನು ಬದಲಾಯಿಸಬೇಕು. ಪ್ರವಾಹದಲ್ಲಿ ಮನೆಗಳ ಹಾನಿಯಾದ ಬಗ್ಗೆ ನಿಖರವಾದ ಮಾಹಿತಿ ಸಂಗ್ರಹಿಸಬೇಕು. ಮನೆಗಳ ಹಾನಿ ಸರ್ವೇ ಕುರಿತಂತೆ ಲೋಪ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ಪ್ರವಾಹ ಉಂಟಾಗಿ ಜಿಲ್ಲೆಯ ಹಲವು ಸೇತುವೆಗಳು ಮುಳುಗಡೆಯಾಗಿವೆ. ನೀರಿನ ಹರಿವು ಕಡಿಮೆಯಾದ ನಂತರ ಸೇತುವೆಗಳ ಸ್ಥಿತಿಗತಿ ಕುರಿತು ತಿಳಿದು ಬರಲಿದೆ. ಪ್ರವಾಹದಿಂದಾಗಿ ಎನ್‌ಡಿಆರ್‌ಎಫ್‌ ಮತ್ತು ಎನ್‌ಸಿಆರ್‌ಎಫ್‌ ನಿಯಮಗಳ ಪ್ರಕಾರ ಜಿಲ್ಲೆಯಲ್ಲಿ 26.16 ಕೋಟಿ ರೂ. ಮೊತ್ತದ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪ್ರವಾಹ ನಿಂತ ಮೇಲೆ ಪ್ರವಾಹ ಹಾನಿ ಪ್ರಮಾಣದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ಬೋಟ್‌ಗಳಲ್ಲಿ ನೆರೆ ಸಂತ್ರಸ್ತರನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗಾಗಿ ತೆರೆಯಲಾಗಿದ್ದ ಪರಿಹಾರ ಕೇಂದ್ರಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸ್ಯಾನಿಟರಿ ಕಿಟ್‌ಗಳನ್ನು ವಿತರಿಸಲಾಗಿದೆ. ಪ್ರಸ್ತುತ ವಡಗೇರಾ ಮತ್ತು ಹತ್ತಿಗುಡೂರು ಪರಿಹಾರ ಕೇಂದ್ರಗಳು ಮಾತ್ರ ಚಾಲ್ತಿಯಲ್ಲಿವೆ. ಸಂತ್ರಸ್ತರಿಗೆ ಬಿಸಿಯಾದ ಆಹಾರವನ್ನು ತಯಾರಿಸಿ ನೀಡಲಾಗುತ್ತಿದೆ. ದಾನಿಗಳು ನೀಡಿದ ಆಹಾರವನ್ನು ಕೂಡ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಅಧಿಕಾರಿಗಳಿಂದ ಪರೀಕ್ಷಿಸಿ ನೀಡಲಾಗಿದೆ ಎಂದು ವಿವರಿಸಿದರು.

Advertisement

ಜಿಪಂ ಸಿಇಒ ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌., ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್‌. ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next