ಯಾದಗಿರಿ: ಜಿಲ್ಲೆಯ 59 ಪರೀಕ್ಷಾ ಕೇಂದ್ರಗಳಲ್ಲಿ ಕಂಟೈನ್ಮೆಂಟ್ ಝೋನ್‌ಗಳ 329 ವಿದ್ಯಾರ್ಥಿಗಳು ಸೇರಿ 17,396 ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. 13 ಪರೀಕ್ಷಾ ಕೇಂದ್ರಗಳು ಕ್ವಾರಂಟೈನ್ ಕೇಂದ್ರಗಳಾಗಿದ್ದವು. 10 ದಿನ ಮುಂಚಿತವಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಒಟ್ಟು 870 ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಿದ್ದು, ಪರೀಕ್ಷಾ ಕೇಂದ್ರಗಳು ಕಂಟೈನ್ಮೆಂಟ್ ಝೋನ್‌ಗಳ ವ್ಯಾಪ್ತಿಯಲ್ಲಿಲ್ಲ. ಶಹಾಪುರ ತಾಲೂಕಿನ 5007 ವಿದ್ಯಾರ್ಥಿಗಳು, ಸುರಪುರ ತಾಲೂಕಿನ 5837, ಯಾದಗಿರಿ ತಾಲೂಕಿನ 6552 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 17396 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಬೇರೆ ಜಿಲ್ಲೆಯ 456 ಮಕ್ಕಳು ಯಾದಗಿರಿಯಲ್ಲಿ ಪರೀಕ್ಷೆಗೆ ಹಾಜರಾಗಲಿದ್ದು, ಇಲ್ಲಿನ 274 ವಿದ್ಯಾರ್ಥಿಗಳು ಇತರೆ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.
ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಎಲ್ಲ ಕೊಠಡಿಗಳಿಗೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ ಒಂದು ಕೋಣೆಯಲ್ಲಿ 18-20 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ದಂಡ ಪ್ರಕ್ರಿಯೆ ಸಂಹಿತೆ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಜ್ವರ, ಕೆಮ್ಮು, ನೆಗಡಿ ಇರುವ ಮಕ್ಕಳಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್ ಆಗಿರುವ ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ನೋಂದಣಿಯಾಗಿದ್ದಾನೆ. ಈಗಾಗಲೇ 6 ದಿನ ಕ್ವಾರಂಟೈನ್‌ನಲ್ಲಿ ಕಳೆದಿದ್ದು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಸಲಾಗುವುದು ಎಂದರು.
ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಮುನ್ನೆಚ್ಚರಿಕೆ ವಹಿಸಿ ಆತ್ಮವಿಸ್ವಾಸದಿಂದ ಪರೀಕ್ಷೆ ಬರೆಯಬೇಕು. ಅಲ್ಲದೆ ಮನೆಯಿಂದಲೇ ನೀರು, ಆಹಾರ ತಂದುಕೊಳ್ಳಬೇಕು. ಒಂದೂವರೆ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕಿದ್ದು ಸ್ಕ್ರೀನಿಂಗ್, ಸ್ಯಾನಿಟೈಸ್ ಹಾಗೂ ಸಾಮಾಜಿಕ ಅಂತರ ಕಾಪಾಡಲಾಗುವುದು ಎಂದರು.
ಸ್ಕ್ರೀನಿಂಗ್ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ನೇಮಿಸಲಾಗಿದ್ದು ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ತಲಾ ಎರಡು ಮಾಸ್ಕ್ ಹಂಚಿಕೆ ಮಾಡಲಾಗುತ್ತಿದೆ ಎಂದರು. ಈ ವೇಳೆ ಜಿಪಂ ಸಿಇಒ ಶಿಲ್ಪಾ ಶರ್ಮಾ, ಪೊಲೀಸ್ ವರಿಷ್ಠಾ ಧಿಕಾರಿ ಋಷಿಕೇಶ ಸೋನಾವಣೆ, ಡಿಡಿಪಿಐ ಶ್ರೀನಿವಾಸರಡ್ಡಿ ಇತರರು ಇದ್ದರು.