ಅನೀಲ ಬಸೂದೆ
ಯಾದಗಿರಿ: ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ಮನೆಗಳ ಬಚ್ಚಲು ನೀರು ರಸ್ತೆಗೆ ಹರಿದು ರಸ್ತೆಯೇ ಚರಂಡಿಯಾಗಿರುವುದನ್ನು ಕಂಡಿದ್ದೇವೆ. ಈಗ ಇಡೀ ಗ್ರಾಮವೇ ಸ್ವತ್ಛವಾಗಿಡಲು ವೈಯಕ್ತಿಕವಾಗಿ ನಿರ್ಮಿಸಿಕೊಳ್ಳುವ ಇಂಗು ಗುಂಡಿಗಳು ಸಹಕಾರಿಯಾಗಲಿವೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ಜನರು ಮನೆ ಬಚ್ಚಲು ನೀರನ್ನು ರಸ್ತೆಗೆ ಹರಿಸದೇ ಗ್ರಾಮ ಸ್ವತ್ಛವಾಗಿಡಲು ಪಣ ತೊಡಬೇಕಿದೆ. ಗುರುಮಠಕಲ್ ತಾಪಂನಿಂದ ಗ್ರಾಮಗಳಲ್ಲಿ 900 ಬಚ್ಚಲು ನೀರು ಇಂಗುವ ಗುಂಡಿ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಇದರಿಂದ ಸ್ವತ್ಛತೆ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು.
ಗುರುಮಠಕಲ್ ತಾಪಂ ವ್ಯಾಪ್ತಿಗೆ 18 ಗ್ರಾಪಂಗಳು ಬರುತ್ತವೆ. ತಲಾ 50ರಂತೆ ಇಂಗು ಗುಂಡಿ ನಿರ್ಮಾಣ ಮಾಡುವ ಕಾರ್ಯ ಚಾಲನೆಯಲ್ಲಿದ್ದು, ಗುಂಡಿ ನಿರ್ಮಾಣದಿಂದ ನೀರು ರಸ್ತೆಗೆ ಹರಿಯದಿರುವುದು ಒಂದು ಲಾಭವಾದರೆ ಭೂಮಿ ನೀರು ಇಂಗುವುದರಿಂದ ಅಂತರ್ಜಲ ಮಟ್ಟವೂ ಏರಿಕೆಯಾಗಲು ಸಾಧ್ಯವಾಗುತ್ತದೆ.
ಗುಂಡಿ ನಿರ್ಮಾಣಕ್ಕೆ ಕುಟುಂಬದ ಒಂದು ನಯಾಪೈಸೆಯೂ ಖರ್ಚಾಗದ ಲಾಭ ದೊರೆಯಲಿದ್ದು ನರೇಗಾ ಯೋಜನೆಯಿಂದ ಒಂದು ಇಂಗು ಗುಂಡಿ ನಿರ್ಮಾಣಕ್ಕೆ 14 ಸಾವಿರ ರೂ. ಭರಿಸಲಾಗುತ್ತಿದೆ. ಇದರ ಲಾಭ ಪಡೆದು ಗ್ರಾಮೀಣ ಭಾಗದ ಜನರು ಗ್ರಾಮ ಸ್ವತ್ಛವಾಗಿಡಲು ಸಹಕರಿಸಬೇಕು ಎನ್ನುತ್ತಾರೆ ಅಧಿಕಾರಿಗಳು.
ಗ್ರಾಮಗಳಲ್ಲಿ ಚರಂಡಿ ನೀರು ರಸ್ತೆಗೆ ಹರಿಯದೇ ಸ್ವತ್ಛತೆ ಕಾಪಾಡುವುದು ಹಾಗೂ ನೀರು ಇಂಗುವುದರಿಂದ ಅಂತರ್ಜಲ ಮಟ್ಟ ವೃದ್ಧಿ ಹಾಗೂ ಆರೋಗ್ಯದ ಹಿತದೃಷ್ಟಿ ಸೇರಿದಂತೆ ಸಾಕಷ್ಟು ಲಾಭಗಳಿವೆ. ಪ್ರತಿ ಫಲಾನುಭವಿಗೆ ತಲಾ 14 ಸಾವಿರ ರೂ. ವ್ಯಯಿಸಲಾಗುತ್ತದೆ. ಪ್ರತಿಯೊಬ್ಬರೂ ಬಚ್ಚಲು ನೀರು ಇಂಗಲು ಇಂಗು ಗುಂಡಿ ನಿರ್ಮಿಸಿಕೊಂಡು ಸ್ವತ್ಛತೆ ಕಾಪಾಡಲು ನೆರವಾಗಬೇಕು.
ಬಸವರಾಜ ಶರಬೈ,
ತಾಪಂ ಕಾರ್ಯ ನಿರ್ವಹಣಾಧಿಕಾರಿ