ತೆಕ್ಕಟ್ಟೆ: ಸ್ವಾತಂತ್ರ ಹೋರಾಟದ ಸಂಗ್ರಾಮದಲ್ಲಿ ನಮ್ಮ ದೇಶ ಸಂಸ್ಕೃತಿಯನ್ನು ಉಳಿಸಿದ ಎಲ್ಲಾ ಕ್ರಾಂತಿಕಾರಿಗಳು, ಧುರೀಣರು ಹಾಗೂ ಸೇನಾನಿಗಳನ್ನು ಸದಾ ಸ್ಮರಿಸಬೇಕಾಗಿದೆ. 1857 ರಲ್ಲಿ ಬ್ರಿಟಿಷರು ಇಲ್ಲಿನ ರಾಜ ಮಹಾರಾಜರಿಗೆ ಬಿರುದು ಬಾವಲಿಗಳನ್ನು ನೀಡಿ, ನೀವೇ ಆಡಳಿತ ಮಾಡಿ ಆದರೆ ಸುಮಾರು 500ಕ್ಕೂ ಅಧಿಕ ರಾಜ ಮಹಾರಾಜರನ್ನು ಬುದ್ದಿವಂತಿಕೆಯಿಂದ ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದ್ದರು ಎಂದು ಏರ್ ಮಾರ್ಷಲ್ ರಮೇಶ್ ಕಾರ್ಣಿಕ್ ಅವರು ಹೇಳಿದರು.
ಅವರು ಆ.15 ರಂದು ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ವಿದ್ಯಾರಣ್ಯ (ಲಿಟ್ಲ್ ಸ್ಟಾರ್) ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಡಾಡಿ ಮತ್ಯಾಡಿ , ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಕುಂದಾಪುರ, ವತಿಯಿಂದ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣಗೈದು ಮಾತನಾಡಿದರು.
ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿಸುವ ನಿಟ್ಟಿನಿಂದ ಶಾಂತಿ, ಸೌಹಾರ್ದತೆ ನೆಲಸಬೇಕು. ನಾನು ಕನ್ನಡ ಮಾಧ್ಯಮದಲ್ಲಿ ಕಲಿತವನ್ನು ಆದರೆ ಜೀವನ ಸಾಧನೆಗೆ ಭಾಷೆ ಅಡ್ಡಿಯಾಗಲಿಲ್ಲ. ಈ ನಿಟ್ಟಿನಲ್ಲಿ ನಮ್ಮ ಭಾಷೆ ಯಾವುದೇ ಆಗಿರಬಹುದು ಅದರ ಜತೆಗೆ ಕನ್ನಡ, ಸಂಸ್ಕೃತ, ಹಿಂದಿ ಕಲಿಯಿರಿ. ಭಾರತದ ಪರಂಪರೆ ಹಾಗೂ ಆಧ್ಯಾತ್ಮ ವಿದ್ಯೆಗೆ ಸಂಸ್ಕೃತ ಭಾಷೆ ಸಾಮಿಪ್ಯವಿದೆ. ಈ ನಿಟ್ಟಿನಲ್ಲಿ ಸಂಸ್ಕೃತ ಭಾಷಾ ಕಲಿಕೆಯಿಂದ ಭಾರತದ ಎಲ್ಲಾ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಲು ಸಾಧ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಏರ್ ಮಾರ್ಷಲ್ ರಮೇಶ್ ಕಾರ್ಣಿಕ್ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿ ಅನಿಲ್ ಕುಮಾರ್ ಹೆಗ್ಡೆ ಮೊಳಹಳ್ಳಿ, ಉದ್ಯಮಿ ದಿವಾಕರ ಶೆಟ್ಟಿ, ಪ್ರವೀಣ್ ಶೆಟ್ಟಿ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಕಾರ್ಯದರ್ಶಿ ಪ್ರತಾಪಚಂದ್ರಶೆಟ್ಟಿ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಪ್ರದೀಪ್ ಕೆ. ಹಾಗೂ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮೂಹ ಗೀತೆ, ಆಕರ್ಷಕ ಪಥ ಸಂಚನ ಹಾಗೂ ಮಂಗಳೂರಿನ ಪ್ರಸಿದ್ದ ಕಲಾವಿದರಿಂದ ರಾಗ ರಂಗ್ ದೇಶ ಭಕ್ತಿ ಗಾಯನ ನಡೆಯಿತು.
ಕನ್ನಡ ಶಿಕ್ಷಕ ಸಂತೋಷ್ ಕುಮಾರ್ ನಿರೂಪಿಸಿ, ಶಿಕ್ಷಕಿ ಪ್ರೀತಿ ವಂದಿಸಿದರು.