ತೆಕ್ಕಟ್ಟೆ: ಎಸ್‌ಕೆಎಫ್ ಎಲಿಕ್ಸರ್ ಪ್ರೈ ಲಿ. ಇದರ ಮಾಲಕ ಡಾ| ಜಿ.ರಾಮಕೃಷ್ಣ ಆಚಾರ್ ಅವರು ತಾನು ಕಲಿತ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ (ಗುಡ್ಡೆಅಂಗಡಿ)ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮೂಡಬಿದಿರೆ ಡಾ| ರಾಮಕೃಷ್ಣ ಆಚಾರ್ ಚಾರಿಟೆಬಲ್ ಟ್ರಸ್ಟ್ (ರಿ.) ತಲ್ಮಕ್ಕಿ (ಹುಣ್ಸೆಮಕ್ಕಿ)ಇದರ ವತಿಯಿಂದ ನೂತನ ಶಾಲಾ ವಾಹನವನ್ನು ಕೊಡುಗೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮವನ್ನು ಮೂಡಬಿದಿರೆ ಡಾ| ರಾಮಕೃಷ್ಣ ಆಚಾರ್‌ಚಾರಿಟೆಬಲ್ ಟ್ರಸ್ಟ್ (ರಿ.) ಇದರ ಪ್ರವರ್ತಕ ಡಾ|ಜಿ.ರಾಮಕೃಷ್ಣ ಆಚಾರ್ ಹಾಗೂ ಸವಿತಾ ರಾಮಕೃಷ್ಣ ಆಚಾರ್ ದಂಪತಿಗಳು ಜೂ.28 ರಂದು ಗುಡ್ಡೆಅಂಗಡಿ ಶ್ರೀ ವಿನಾಯಕ ಸಭಾಭವನದಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ| ಜಿ.ರಾಮಕೃಷ್ಣ ಆಚಾರ್ ಮಾತನಾಡಿ, ನಾವು ನೀಡುವ ಕೊಡುಗೆ ಮಕ್ಕಳಿಗೆ ತಲುಪಬೇಕು ಎನ್ನುವ ಕಾರ್ಯವನ್ನು ಮಾಡಿದ್ದೇವೆ. ಅತ್ಯಂತ ಕಷ್ಟದ ದಿನಗಳಲ್ಲಿ ನಮ್ಮೂರ ಸರಕಾರಿ ಕನ್ನಡ ಶಾಲೆಗೆ ಹೋಗುವಾಗ ಬದುಕಿನ ಕಷ್ಟದ ಅರಿವಿತ್ತು. ಜತೆಗೆ ದೊಡ್ಡ ದೊಡ್ಡ ಕನಸುಗಳಿತ್ತು. ಆದರೆ ಶಾಲಾ ಶುಲ್ಕ ಕಟ್ಟಲು ಹಣವಿರಲಿಲ್ಲ ಎಂದ ಅವರು ಇವತ್ತು ನಾವು ಈ ಮಟ್ಟಕ್ಕೆ ಬೆಳೆಯಬೇಕಾದರೆ ಒಳ್ಳೆಯ ಕನಸು, ನಿರಂತರ ಚಿಂತನೆ, ಪರಿಶ್ರಮ, ತ್ಯಾಗ ಹಾಗೂ ವಿಶಾಲ ಮನಸ್ಸುಗಳಿದ್ದಾಗ ಮಾತ್ರ ಭವಿಷ್ಯದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಲು ಸಹಾಯಕವಾಗುವುದು ಎಂದರು.
ಪ್ರಸ್ತುತ ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಆಕರ್ಷಿತರಾಗುತ್ತಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಭದ್ರತೆಯನ್ನು ನೋಡುತ್ತಿದ್ದಾರೆ. ಈ ನಡುವೆ ಸರಕಾರಿ ಕನ್ನಡ ಶಾಲಾ ಉಳಿವಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮಹತ್ವದ ಕಾರ್ಯವಾದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮ ತರಗತಿ ಜತೆಗೆ ಕಂಪ್ಯೂಟರ್ ಜ್ಞಾನವು ಕೂಡಾ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದಾನಿ ಡಾ|ಜಿ.ರಾಮಕೃಷ್ಣ ಆಚಾರ್ ಹಾಗೂ ಸವಿತಾ ರಾಮಕೃಷ್ಣ ಆಚಾರ್ ದಂಪತಿಗಳನ್ನು ಸಂಸ್ಥೆಯ ವತಿಯಿಂದ ಗುರುತಿಸಿ ಸಮ್ಮಾನಿಸಲಾಯಿತು.
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಇದರ ಅಧ್ಯಕ್ಷ ಮಹೇಶ್ ಹೆಗ್ಡೆ ಮೊಳಹಳ್ಳಿ ಅವರು ನೂತನ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಸಾಧಕ ಉದ್ಯಮಿ ಡಾ|ಜಿ.ರಾಮಕೃಷ್ಣ ಆಚಾರ್ ಅವರು ಈ ಊರಿಗೆ ಹೆಮ್ಮೆ. ಬುದ್ದಿವಂತರನ್ನು ಸೃಷ್ಟಿ ಮಾಡಿದ ಈ ನೆಲದ ಋಣ ತೀರಿಸಬೇಕು ಎನ್ನುವ ಹಂಬಲದಿಂದ ಇಂದು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಇವರ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಹಣ ಎಲ್ಲರೂ ಸಂಪಾದನೆ ಮಾಡುತ್ತಾರೆ. ಆದರೆ ಅದನ್ನು ಸಮಾಜಕ್ಕೆ ಕೊಡುವ ಮನಸ್ಸು ಎಲ್ಲರಲ್ಲಿಯೂ ಇರುವುದಿಲ್ಲ. ಸ್ವಂತಕ್ಕಾಗಿ ಖರ್ಚು ಮಾಡಿದ ಹಣ ತನಗಾಗಿಯೇ ಇರುತ್ತದೆ. ಅದೇ ನನ್ನ ಊರಿನ ಶಾಲೆಗೆ ನೀಡಿದ ಕೊಡುಗೆಯಿಂದ ಗ್ರಾಮದ ಅದೆಷ್ಟೋ ಕುಟುಂಬಗಳ ಜೀವನ ಸುಗಮವಾಗುತ್ತದೆ ಎಂದು ಹೇಳಿದರು.
ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಇದರ ಉಪಾಧ್ಯಕ್ಷ, ಮೂಡಬಿದಿರೆ ಡಾ| ರಾಮಕೃಷ್ಣ ಆಚಾರ್ ಚಾರಿಟೆಬಲ್ ಟ್ರಸ್ಟ್ (ರಿ.) ತಲ್ಮಕ್ಕಿ (ಹುಣ್ಸೆಮಕ್ಕಿ)ಇದರ ಅಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಕಾಲೇಜಿನ ಪ್ರಾಚಾರ್ಯ ಟ್ರಸ್ಟ್‌ನ ಕಾರ್ಯದರ್ಶಿ ಡಾ| ಎಂ.ಬಾಲಕೃಷ್ಣ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೊಗವೀರ, ಟ್ರಸ್ಟ್ ನ ಸದಸ್ಯ ಚಂದ್ರ ಕುಲಾಲ್, ಇಸಿಒ ಶೇಖರ್ ಯು., ಗ್ರಾ.ಪಂ. ಸದಸ್ಯರು, ಟ್ರಸ್ಟ್‌ನ ಪದಾಧಿಕಾರಿಗಳು , ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರಮಣಿ ಸ್ವಾಗತಿಸಿ, ಟ್ರಸ್ಟ್‌ನ ಕಾರ್ಯದರ್ಶಿ ಡಾ| ಎಂ.ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದು, ಶಿಕ್ಷಕಿ ಪೂರ್ಣಿಮಾ ನಿರೂಪಿಸಿ, ಶಿಕ್ಷಕಿ ಮಂಜುಳಾ ವಂದಿಸಿದರು.
ಬದುಕನ್ನು ಎದುರಿಸುವ ಶಕ್ತಿ ನೀಡಿದ ನಾನು ಕಲಿತ ಯಡಾಡಿ ಮತ್ಯಾಡಿ (ಗುಡ್ಡೆಅಂಗಡಿ)ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಿಂದ ಶಾಲೆಗೆ ಸುಮಾರು ರೂ.7ಲಕ್ಷ ಮೊತ್ತದ ವಾಹನವನ್ನು ಕೊಡುಗೆಯಾಗಿ ನೀಡಿದ್ದೇವೆ. ಜತೆಗೆ ಸುಮಾರು 5 ವರ್ಷಗಳ ಕಾಲ ವಾಹನಗಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಈಗಾಗಲೇ ಟ್ರಸ್ಟ್‌ನ ಅಡಿಯಲ್ಲಿ ಗ್ರಾಮೀಣ ಭಾಗದ ಜನತೆಗೆ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ನೀಡುತ್ತಿದ್ದು , ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನತೆಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸಲಿದ್ದೇವೆ.
– ಡಾ|ಜಿ. ರಾಮಕೃಷ್ಣ ಆಚಾರ್ , ಗೌರವಾಧ್ಯಕ್ಷರು, ಮೂಡಬಿದಿರೆ ಡಾ| ರಾಮಕೃಷ್ಣ ಆಚಾರ್ ಚಾರಿಟೆಬಲ್ ಟ್ರಸ್ಟ್ (ರಿ.)