Advertisement

ಬೆಲೆ ಏರಿಕೆ ಖಂಡಿಸಿ ಪಾದಯಾತ್ರೆ

06:46 PM Mar 07, 2021 | Team Udayavani |

ಕಡೂರು: ಪೆಟ್ರೋಲ್‌, ಡೀಸೆಲ್‌ ಮತ್ತು ಅಡಿಗೆ ಅನಿಲ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಯಿತು.

Advertisement

ಬೀರೂರು ಪಟ್ಟಣದ ಮೆಸ್ಕಾಂ ಕಚೇರಿಯಿಂದ ಶನಿವಾರ ಆರಂಭವಾದ ಪಾದಯಾತ್ರೆ ಉರಿ ಬಿಸಿಲನ್ನು ಲೆಕ್ಕಿಸದೆ 9 ಕಿಮೀ ದೂರವನ್ನು ಕ್ರಮಿಸಿ ಕಡೂರು ಪಟ್ಟಣದ ತಾಲೂಕು ಕಚೇರಿಯನ್ನು ತಲುಪಿತು. ಮಾರ್ಗದುದ್ದಕ್ಕೂ ಪಾದಯಾತ್ರೆಯಲ್ಲಿ ಪಾಲ್ಗೊಂಡ ಜನರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ  ನೀತಿಯನ್ನು ಖಂಡಿಸಿ ಜಯಘೋಷಗಳು ಮೊಳಗಿದವು. ಅಲಂಕೃತ ಎತ್ತಿನಗಾಡಿಗಳು ಭವಿಷ್ಯದ ಕರಾಳ ದಿನಗಳನ್ನು ನೆನಪಿಸುತ್ತ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದವು. ಮಾಜಿ ಶಾಸಕ ದತ್ತ ಅವರ ನಡೆ ಯುವಕರನ್ನು ನಾಚಿಸುವಂತಿತ್ತು. ಹಲವಾರು ಯುವಕರು ಅವರ ಜತೆ ಏದುಸಿರು ಬಿಡುತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯವೂ ಕಂಡು ಬಂದಿತು.

ತಾಲೂಕು ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ದತ್ತ ಅವರು ಮಾತನಾಡಿ, ಕೇಂದ್ರ ಸರ್ಕಾರ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಅಗತ್ಯ ವಸ್ತುಗಳ ಮೇಲೆ ತೆರಿಗೆಯನ್ನು ಹೇರದೆ ಸೆಸ್‌ ರೂಪದಲ್ಲಿ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರ ಬದುಕು ಬರ್ಬರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವದಾದ್ಯಂತ ಎಲ್ಲೂ ಇಲ್ಲದ ಪೆಟ್ರೊಲ್‌ ಮತ್ತು ಡೀಸೆಲ್‌ ಬೆಲೆ ಭಾರತದಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರದ ಧೋರಣೆಯೇ ಕಾರಣ. ಕಚ್ಚಾ ತೈಲ ಬೆಲೆ ಅಗ್ಗದ ದರದಲ್ಲಿ ಸಿಗುತ್ತಿದ್ದರೂ ಕೇಂದ್ರ ಸರ್ಕಾರವು ಲೀಟರ್‌ ಪೆಟ್ರೋಲಿಗೆ 100 ರೂ. ದರ ನಿಗದಿ ಮಾಡಿದೆ. ಇದು ಬಡವರ ವಿರೋಧಿ  ಸರ್ಕಾರದ ಆಡಳಿತ ಎಂದು ವ್ಯಂಗವಾಡಿದರು. ರೈತಾಪಿ ವರ್ಗ, ಕೂಲಿ ಕಾರ್ಮಿಕ ವರ್ಗ ಇಂದು ಪ್ರತಿಯೊಂದಕ್ಕೂ ದ್ವಿಚಕ್ರ ವಾಹನಗಳನ್ನು ಅವಲಂಬಿಸಿದೆ. ಆದರೆ ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆ ಏರಿಕೆ ಈ ಜನರ ಬದುಕನ್ನೇ ಕಿತ್ತುಕೊಂಡಿದೆ. ಇದರ ಜೊತೆಗೆ ಜನಸಾಮಾನ್ಯರು ಆಹಾರ ಬೇಯಿಸಿಕೊಂಡು ತಿನ್ನಲು ಕೂಡ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಗಗನ ಮುಟ್ಟಿರುವ ಅಡುಗೆ ಅನಿಲದ ಬೆಲೆ ಎಂದು ಲೇವಡಿ ಮಾಡಿದರು.

ಉಜ್ವಲ್‌ ಯೋಜನೆಯಡಿ ಬಡವರಿಗೆ ಅಡುಗೆ ಅನಿಲ ನೀಡಿದ ಕೇಂದ್ರ ಸರ್ಕಾರ ಅನಿಲದ ಬೆಲೆಯನ್ನೇ ಏರಿಸಿ ಬಡವರ ಪಾಲಿಗೆ ರಾಕ್ಷಸನಂತಾಗಿರುವುದು ದೊಡ್ಡ ದುರಂತ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತ ಕೇವಲ 7 ವರ್ಷದಲ್ಲಿ ದೊಡ್ಡ ಭ್ರಮ ನಿರಸನ ಉಂಟು ಮಾಡಿದೆ ಎಂದರು.

Advertisement

ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್‌ ಮಾತನಾಡಿ, ಬಿಜೆಪಿಯ ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಭಕ್ತರು ಪೆಟ್ರೋಲ್‌ ಬೆಲೆ ಸಾವಿರಕ್ಕೆ ಏರಿದರೂ ಬಳಸುತ್ತೇವೆ ಎಂಬ ಭ್ರಮೆಯ ಮಾತನಾಡುತ್ತಾರೆ. ಕೇಂದ್ರ ಸರ್ಕಾರವು ಅಂತಹ ಭಕ್ತರಿಗೆ ದರವನ್ನು ನಿಗದಿ ಮಾಡಿ ನಮ್ಮಂತಹ ಬಡವರಿಗೆ ಒಂದು ದರ ನಿಗದಿ ಮಾಡಲಿ ಎಂದು ವ್ಯಂಗ್ಯವಾಡಿದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂಬ ಭ್ರಮೆಯನ್ನು ಹುಟ್ಟು ಹಾಕಿದೆ. ವಾಸ್ತವವಾಗಿ ದೇಶದ ಅಭಿವೃದ್ಧಿ 70 ವರ್ಷದ ಹಿಂದಕ್ಕೆ ಸಾಗಿದೆ. ಬೆಲೆ ಏರಿಕೆಯ ಕಪಿಮುಷ್ಠಿಯಿಂದ ಜನರು ನರಳುತ್ತಿದ್ದಾರೆ. ಉದ್ಯೋಗವಿಲ್ಲದೆ ಯುವ ಜನತೆ ಕಂಗಾಲಾಗಿದ್ದಾರೆ ಎಂದು ಹೇಳಿದರು. ಜೆಡಿಎಸ್‌ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್‌,ಯುವ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮ್‌ಕುಮಾರ್‌, ಯರದಕೆರೆ ರಾಜಪ್ಪ, ಮೋಹನ್‌ಕುಮಾರ್‌, ಮುಬಾರಕ್‌, ಬಾವಿ ಮನೆ ಮಧು, ಪಂಚನಹಳ್ಳಿ ಪಾಪಣ್ಣ, ಯಳಗೊಂಡನಹಳ್ಳಿ ಈಶ್ವರಪ್ಪ, ಸಾಣೆಹಳ್ಳಿ ನಿಂಗಪ್ಪ,  ಕಂಸಾಗರ ರೇವಣ್ಣ, ಚನ್ನೆನಹಳ್ಳಿ ಆನಂದ್‌ ಪಿ.ಸಿ. ಗಂಗಾಧರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next