ಮೊಬೈಲ್ ಫೋನ್ ಬಳಕೆದಾರರ ಪೈಕಿ 12 ಸಾವಿರ ರೂ.ಗಳಿಂದ 15 ಸಾವಿರ ರೂ. ಬಜೆಟ್‍ನೊಳಗಿನ ಫೋನ್‍ಗಳನ್ನು ಬಳಸುವವರು ಹೆಚ್ಚು. ಈ ದರಪಟ್ಟಿಯಲ್ಲಿ ಎರಡು ಮೂರು ಫೋನ್ ಕೊಂಡವರು ನಂತರ 25 ಸಾವಿರ ರೂ. ಆಸುಪಾಸಿನಲ್ಲಿ ಯಾವುದಾದರೂ ಫೋನ್ ಕೊಳ್ಳೋಣ ಎಂಬ ಲೆಕ್ಕಾಚಾರ ಹೊಂದಿರುತ್ತಾರೆ. ಆ ದರಪಟ್ಟಿಯಲ್ಲಿ ಒಂದು ಉತ್ತಮ ಫೋನ್ ಶಿಯೋಮಿ 11ಐ 5ಜಿ.
ಈ ದರ ವಲಯದಲ್ಲಿ, ಶಿಯೋಮಿ 11ಐ ಫೋನು ಎಲ್ಲ ವಿಭಾಗಗಳಲ್ಲೂ ಉತ್ತಮ ಅಂಕ ಪಡೆಯುತ್ತದೆ. ಅದರ ಡಿಸೈನ್, ಲುಕ್, ಪ್ರೊಸೆಸರ್, ಸ್ಕ್ರೀನ್, ಕ್ಯಾಮರಾ, ಬ್ಯಾಟರಿ ಎಲ್ಲ ತೃಪ್ತಿದಾಯಕವಾಗಿವೆ. ಈ ಫೋನು ಮಾಮೂಲಿ ವೇಗದ ಚಾರ್ಜರ್ ಹಾಗೂ ಹೈಪರ್ ಚಾರ್ಜ್ ಎಂಬ ಎರಡು ಆವೃತ್ತಿ ಹೊಂದಿದೆ. ಇಲ್ಲಿ ತಿಳಿಸಿರುವ ಫೋನು ಮಾಮೂಲಿ ವೇಗದ ಚಾರ್ಜ್ ಹೊಂದಿರುವಂಥದು. ಇದರಲ್ಲಿ 6 ಜಿಬಿ ರ್ಯಾಮ್, 128 ಜಿಬಿ ಮೆಮೊರಿ ವರ್ಷನ್ 24,999 ರೂ. 8 ಜಿಬಿ ರ್ಯಾಮ್, 128 ಜಿಬಿ ಮೆಮೊರಿ ವರ್ಷನ್ 26,999 ರೂ. ಬೆಲೆ ಇದೆ. (6 ಜಿಬಿ ರ್ಯಾಮ್ ಆವೃತ್ತಿಯೇ ಸಾಕು.) ಇದು ಫ್ಲಿಪ್‍ಕಾರ್ಟ್ ನಲ್ಲಿ ಲಭ್ಯ.
ಸ್ಕ್ರೀನ್: ಇದು 6.67 ಇಂಚಿನ ಫುಲ್ ಎಚ್‍ಡಿ ಪ್ಲಸ್ ಅಮೋಲೆಡ್ ಸ್ಕ್ರೀನ್ ಹೊಂದಿದೆ. 120 ಹರ್ಟ್ಜ್ ರಿಫ್ರೆಶ್‍ರೇಟ್ ಇರುವುದರಿಂದ ಬಹಳ ಮೃದುವಾಗಿ ಸ್ಕ್ರಾಲಿಂಗ್ ಆಗುತ್ತದೆ. 1200 ನಿಟ್ಸ್ ಉಳ್ಳ ಪರದೆಯ ಬ್ರೈಟ್‍ನೆಸ್ ಇದೆ. ಈ ವಲಯದಲ್ಲಿ ಇದು ಹೆಚ್ಚು ನಿಟ್ಸ್ ಉಳ್ಳ ಬ್ರೈಟ್‍ನೆಸ್ ಹೊಂದಿದೆ. ಹೀಗಾಗಿ ಬಿಸಿಲಿನಲ್ಲೂ ಪರದೆ ಬಹಳ ಚೆನ್ನಾಗಿ ಕಾಣುತ್ತದೆ. ಪರದೆಗೆ ಕಾರ್ನಿಂಗ್ ಗ್ಲಾಸ್ 5 ರಕ್ಷಣೆಯಿದ್ದು, ಐಪಿ53 ರೇಟಿಂಗ್ ಹೊಂದಿದೆ. ಪರದೆಯನ್ನು ಸ್ಪರ್ಶಿಸುವ ಟಚ್ ಸ್ಯಾಂಪ್ಲಿಂಗ್ ರೇಟಿಂಗ್ 360 ಹರ್ಟ್ಝ್ ಇರುವುದರಿಂದ ವೇಗವಾದ ಸ್ಪರ್ಶ ಸಂವೇದನೆ ಹೊಂದಿದೆ. ಕಾಂಟ್ರಾಸ್ಟ್ ರೇಶಿಯೋ ಹೆಚ್ಚಿದ್ದು, ಪರದೆ ಹೆಚ್ಚು ರಿಚ್ ಆಗಿ ಕಾಣುತ್ತದೆ.
ಡಿಸೈನ್: ಮೊಬೈಲ್‍ನ ಬಾಡಿ ಡಿಸೈನ್ ಆಕರ್ಷಕವಾಗಿದೆ. ಮೊಬೈಲ್ ಫ್ರೇಮ್ ಲೋಹದ್ದಾಗಿದ್ದು, ಮೊಬೈಲ್ ಫೋನ್ ಅಂಚು ಐಫೋನಿನ ಅಂಚುಗಳನ್ನು ಹೋಲುತ್ತದೆ. ಮೊಬೈಲ್‍ನ ಹಿಂಬದಿ ಪ್ಯಾನೆಲ್ ಗ್ಲಾಸ್‍ನದ್ದಾಗಿದೆ. ಈ ಬ್ಯಾಕ್ ಗ್ಲಾಸ್ ಎರಡು ಶೇಡ್ ಬಣ್ಣಗಳನ್ನು ಹೊಂದಿದೆ. ಹಿಂಬದಿ ಪ್ಯಾನೆಲ್ ನ ಎಡ ಮೂಲೆಯಲ್ಲಿ ಕ್ಯಾಮರಾ ಲೆನ್ಸ್ ಗಳ ಸಮುಚ್ಛಯವನ್ನು ಮೊಬೈಲ್ ಬಾಡಿಯಿಂದ ಉಬ್ಬಿದ ವಿನ್ಯಾಸದಲ್ಲಿ ಅಳವಡಿಸಲಾಗಿದೆ. ಮೊಬೈಲ್ ಫ್ರೇಮ್‍ನ ಮೇಲೆ ಹಾಗೂ ಕೆಳಗೆ ಎರಡೂ ಬದಿಗಳಲ್ಲಿ ಸ್ಪೀಕರ್ ಕಿಂಡಿಗಳನ್ನು ನೀಡಲಾಗಿದ್ದು, ಸಂಗೀತ ಆಲಿಸುವಾಗ ಇಯರ್ ಬಡ್ ಹೊರತುಪಡಿಸಿ, ಮೊಬೈಲ್‍ನಲ್ಲೇ ಸ್ಟೀರಿಯೋ ಅನುಭವ ದೊರಕುತ್ತದೆ. ಡಾಲ್ಬಿ ಅಟ್ಮೋಸ್ ಆಡಿಯೋ ನೀಡಿರುವುದರಿಂದ ಇಯರ್ ಬಡ್ ನಲ್ಲಿ ಉತ್ತಮ ಸಂಗೀತ ಆಲಿಸಬಹುದಾಗಿದೆ.
ಇದನ್ನೂ ಓದಿ:ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಬಳಿಕ ದೂರವಾದ ಎಲಾನ್ ಮಸ್ಕ್- ಗ್ರಿಮ್ಸ್
ಕ್ಯಾಮರಾ: ಇದರಲ್ಲಿ 108 ಮೆ.ಪಿ. ಮುಖ್ಯ ಕ್ಯಾಮರಾ ಇದೆ. ಇದು ಮೂರು ಲೆನ್ಸ್ ಗಳನ್ನು ಒಳಗೊಂಡಿದೆ. 8 ಮ.ಪಿ. ವೈಡ್ ಆಂಗಲ್, 2 ಮೆಪಿ ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫೀ ಕ್ಯಾಮರಾ 16 ಮೆ.ಪಿ. ಇದೆ. ಈ ರೇಂಜಿನಲ್ಲಿ ಕ್ಯಾಮರಾ ಫಲಿತಾಂಶ ತೃಪ್ತಿಕರವಾಗಿದೆ. ಮಂದ ಬೆಳಕಿನಲ್ಲೂ ಉತ್ತಮ ಚಿತ್ರಗಳು ಮೂಡಿಬರುತ್ತವೆ. ಹೊರಾಂಗಣ ಮಾತ್ರವಲ್ಲದೇ, ಒಳಾಂಗಣದಲ್ಲೂ ಫೋಟೋ ಗುಣಮಟ್ಟ ಚೆನ್ನಾಗಿದೆ. ಸೆಲ್ಫಿ ಕ್ಯಾಮರಾ 16 ಮೆ.ಪಿ. ಈ ದರಪಟ್ಟಿಗೆ ಕಮ್ಮಿ ಎನಿಸಿತು. 32 ಮೆ.ಪಿ. ಆದರೂ ಇರಬೇಕಿತ್ತು.
ಪ್ರೊಸೆಸರ್: ಇದರಲ್ಲಿ ಮೀಡಿಯಾಟೆಕ್ ಡೈಮಿನ್ಸಿಟಿ 920 ಪ್ರೊಸೆಸರ್ ಅಳವಡಿಸಲಾಗಿದೆ. ಇದೊಂದು ಸಮರ್ಥ ಪ್ರೊಸೆಸರ್. ಮೊಬೈಲ್‍ನ ವೇಗದ ಕಾರ್ಯಾಚರಣೆಗೆ ಸಹಾಯಕವಾಗಿದೆ. ಇದು ಕ್ವಾಲ್‍ಕಾಂ ಸ್ನಾಪ್‍ಡ್ರಾಗನ್ 860 ಪ್ರೊಸೆಸರ್ ಸಾಮರ್ಥ್ಯಕ್ಕೆ ಸಮನಾದುದು. ಗೇಮ್‍ಗಳನ್ನಾಡಲೂ ಸಹ ಸೂಕ್ತವಾಗಿದೆ. 5ಜಿ ಸೌಲಭ್ಯ ಹೊಂದಿದೆ.
ಬ್ಯಾಟರಿ: ಬ್ಯಾಟರಿ ಸಾಮರ್ಥ್ಯ 5160 ಎಂಎಎಚ್ ಇದೆ. ಇದಕ್ಕೆ 67 ವ್ಯಾಟ್ಸ್ ವೇಗದ ಚಾರ್ಜರ್ ಅನ್ನು ಬಾಕ್ಸ್ ಜೊತೆ ನೀಡಿರುವುದು ಪ್ಲಸ್ ಪಾಯಿಂಟ್. ಈಗ ಕೆಲವು ಕಂಪೆನಿಗಳು ಮೊಬೈಲ್ ಜೊತೆ ಚಾರ್ಜರ್ ಕೊಡುವುದನ್ನೇ ನಿಲ್ಲಿಸುತ್ತಿವೆ. ಹೀಗಿರುವಾಗ 67 ವ್ಯಾಟ್ಸ್ ವೇಗದ ಚಾರ್ಜರ್ ನೀಡಿರುವುದರಿಂದ ಗ್ರಾಹಕನಿಗೆ ಹೆಚ್ಚುವರಿಯಾಗಿ ವೇಗದ ಚಾರ್ಜರ್ ಖರೀದಿಸುವ ಹೊರೆ ಇಲ್ಲ.
ಒಟ್ಟಾರೆ, ನಾವು ಕೊಡುವ ಹಣಕ್ಕೆ ತಕ್ಕದಾದ ಮೌಲ್ಯ ಒದಗಿಸುವ ಫೋನ್ ಇದು ಎನ್ನಲಡ್ಡಿಯಿಲ್ಲ. ಒನ್‍ಪ್ಲಸ್ ನಾರ್ಡ್ 5 ಸಿಇ 2, ಸ್ಯಾಮ್ ಸಂಗ್ ಅ52ಎಸ್, ಐಕೂ ಝಡ್5 ಗೆ ಉತ್ತಮ ಪೈಪೋಟಿ ನೀಡುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ