ಬೀಜಿಂಗ್: ಚೀನದ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಜೀವಿತಾವಧಿಯವರೆಗೆ ಇದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಚೀನದ ಸಂವಿಧಾನದಲ್ಲಿ ಐತಿಹಾಸಿಕ ತಿದ್ದುಪಡಿ ತಂದು, ಸಂಸತ್‌ನಲ್ಲಿ ಅದಕ್ಕೆ ಒಪ್ಪಿಗೆಯನ್ನೂ ಪಡೆಯಲಾಗಿದೆ.
ಪ್ರಸಕ್ತ ತಿಂಗಳಲ್ಲಿಯೇ ಕ್ಸಿ ಜಿನ್‌ಪಿಂಗ್ ಅವರು ಎರಡನೇ ಅವಧಿಗೆ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವ ಅವಕಾಶ ಪಡೆಯುವವರಿದ್ದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನ (ಸಿಪಿಸಿ)ದ ಸಂಸ್ಥಾಪಕ ಮಾವೋ ಝೆಡಾಂಗ್ ಜೀವಿತಾವಧಿಯವರೆಗೆ ಚೀನದ ಅಧ್ಯಕ್ಷರಾಗಿದ್ದರು. ಅವರ ಬಳಿಕ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಈ ಅವಕಾಶ ಸಿಗುತ್ತಿದೆ. ಹೀಗಾಗಿ ಅಂಥ ಅವಕಾಶ ಪಡೆದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಈ ಬೆಳವಣಿಗೆಯಿಂದಾಗಿ ಚೀನದ ಸಂಸತ್, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಸಿ) ಆಡಳಿತ ಪಕ್ಷ ಸೂಚಿಸುವ ಅಂಶಗಳಿಗೆ ಒಪ್ಪಿಗೆ ಸೂಚಿಸುವ ರಬ್ಬರ್‌ಸ್ಟಾಂಪ್ ಎಂಬ ಅನ್ವರ್ಥ ನಾಮವನ್ನು ಉಳಿಸಿಕೊಂಡಂತಾಗಿದೆ.
ಇದುವರೆಗೆ ಚೀನದಲ್ಲಿ ಅಧ್ಯಕ್ಷರಾದ ವ್ಯಕ್ತಿ ಎರಡು ಬಾರಿಗೆ ಮಾತ್ರ ಆ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಇತ್ತು. ಚೀನ ಸಂವಿಧಾನದಲ್ಲಿ ಸದ್ಯ ಉಲ್ಲೇಖವಾಗಿರುವ ಅಧ್ಯಕ್ಷ, ಉಪಾಧ್ಯಕ್ಷ ಎಂಬ ಹುದ್ದೆಯನ್ನು ತೆಗೆದುಹಾಕಲು ಕೂಡ ಸಂಸತ್‌ನಲ್ಲಿ ಒಪ್ಪಿಕೊಳ್ಳಲಾಗಿದೆ. ಪ್ರಸ್ತಾವ ಅಂಗೀಕಾರಕ್ಕೆ 2,958 ಮತಗಳು ಬಂದಿವೆ. ಇಬ್ಬರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಮೂವರು ಗೈರು ಹಾಜರಾಗಿದ್ದರು.
ರವಿವಾರ ನಡೆದ ಮತದಾನದಲ್ಲಿ ಮತಪತ್ರಗಳನ್ನು ಬಳಕೆ ಮಾಡಲಾಗಿತ್ತು. ವಿದ್ಯುನ್ಮಾನ ಮತಯಂತ್ರ ಅಥವಾ ನಿರ್ಧಾರಕ್ಕೆ ಸಮ್ಮತಿ ಸೂಚಿಸಲು ಕೈ ಎತ್ತಿ ಅಭಿಪ್ರಾಯ ತಿಳಿಸುವ ವ್ಯವಸ್ಥೆಯನ್ನು ಅನುಸರಿಸಲಾಗಿರಲಿಲ್ಲ. ಸಂಸತ್‌ನಲ್ಲಿ ಅಧ್ಯಕ್ಷ ಕ್ಸಿ ಅವರು ಮೊದಲು ಎದ್ದು ನಿಂತು ಮತ ಹಾಕಿದರು. ಇದಕ್ಕೂ ಮುನ್ನ ಸಿಪಿಸಿಯ ಉನ್ನತ ಮಟ್ಟದ ಸಮಿತಿಯಾಗಿರುವ ಏಳು ಮಂದಿ ಸದಸ್ಯರು ಸಂವಿಧಾನ ತಿದ್ದುಪಡಿಲಿಗೆ ಒಪ್ಪಿಗೆ ಸೂಚಿಸಿದ್ದರು.
ತಿದ್ದುಪಡಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ರಾಜಕೀಯ ವಿಶ್ಲೇಷಕರು, ಒಂದು ಪಕ್ಷದ ಆಡಳಿತ ಎನ್ನುವುದಕ್ಕಿಂತ ಒಬ್ಬ ವ್ಯಕ್ತಿಯ ಆಡಳಿತ ಎಂಬ ಸ್ಥಿತಿ ಬಂದಿದೆ. ಇದೊಂದು ಚಕ್ರವರ್ತಿಯ ಆಡಳಿತದಂತೆ ಇದೆ. ಅದು ನೆರೆಯ ರಾಷ್ಟ್ರಗಳ ಮೇಲೆ ಪ್ರಭಾವ ಬೀರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ- ಚೀನ ಸಂಬಂಧ
ಹಾಲಿ ಅಧ್ಯಕ್ಷರ ಅವಧಿಯಲ್ಲಿಯೇ 73 ದಿನಗಳ ಡೋಕ್ಲಾಂ ವಿವಾದ ಉಂಟಾಗಿತ್ತು. ಕೋಟ್ಯಂತರ ರೂ. ಮೌಲ್ಯದ ವಿವಿಧ ಕಾಮಗಾರಿಗಳಲ್ಲಿ ನೆರೆಯ ರಾಷ್ಟ್ರ ಹೂಡಿಕೆ ಮಾಡಿದೆ. ಅದರಲ್ಲಿ ಚೀನ ಪಾಕಿಸ್ಥಾನ ಇಕಾನಮಿಕ್ ಕಾರಿಡಾರ್ ಯೋಜನೆಯೂ ಸೇರಿದೆ.
ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್, ಭೂತಾನ್‌ಗಳಲ್ಲಿಯೂ ಅದು ರಸ್ತೆ ಮತ್ತು ರೈಲು ಸಂಪರ್ಕ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ. ಇದು ಭಾರತಕ್ಕೆ ವ್ಯೂಹಾತ್ಮಕವಾಗಿ ಸವಾಲೂ ಹೌದು.