ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೂರು ಹಳ್ಳಿಗಳಲ್ಲಿ ಜೆರೋಡರ್ಮಾ ಪಿಗ್ಮೆಂಟೋಸಂ ಎಂಬ ಚರ್ಮರೋಗಕ್ಕೆ 14 ಮಕ್ಕಳು ತುತ್ತಾಗಿದ್ದಾರೆ. ಹನೂರು ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ ಮತ್ತು ಶೆಟ್ಟಳ್ಳಿ ಗ್ರಾಮ ದಲ್ಲಿ ಮಕ್ಕಳು ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿರು ವುದು ಬೆಳಕಿಗೆ ಬಂದಿತ್ತು. ಈ ಕಾಯಿಲೆಗೆ ತುತ್ತಾಗಿರುವ ಮಕ್ಕಳಿಗೆ ಆರು ತಿಂಗಳ ಮಗು ವಾಗಿದ್ಧಾಗಲೇ ಈ ವಿಚಿತ್ರ ಚರ್ಮರೋಗ ಕಾಣಿಸಿಕೊಂಡಿದ್ದು ಬಳಿಕ ಮೈ ಚರ್ಮವೆಲ್ಲ ಚುಕ್ಕಿಗಳಾಗಿ ಪರಿವರ್ತನೆಯಾಗಿ, ವೃದ್ಧರ ಚರ್ಮದಂತೆ ಮಾರ್ಪಾಟಾಗಿ ದೃಷ್ಟಿ ದೋಷ, ಶ್ರವಣದೋಷ ಉಂಟಾಗಿದೆ. 18-20 ವರ್ಷ ತುಂಬುವುದರೊಳಗೆ ಕಾಯಿಲೆಗೆ ತುತ್ತಾ ದವರು ಮೃತರಾಗಿದ್ದಾರೆ.
ಜೆರೋಡರ್ಮಾ ಪಿಗ್ಮೆಂಟೋಸಂ ಎಂದು ಜೆನೆಟಿಕ್ ರಿಸರ್ಚ್‌ನಲ್ಲಿ ಕಾಯಿಲೆಯನ್ನು ಗುರುತಿ ಸಿದ್ದು, ಇಲ್ಲಿಯವರೆಗೆ 14 ಮಕ್ಕಳು ಈ ಕಾಯಿಲೆಗೆ ತುತ್ತಾಗಿದ್ಧಾರೆ. 8 ಮಕ್ಕಳು ಸಾವನ್ನಪ್ಪಿದ್ಧಾರೆ. ಸದ್ಯ ಆರು ಮಕ್ಕಳು ಈ ಕಾಯಿಲೆಯಿಂದ ಬಾಧಿತರಾಗಿ ದ್ದಾರೆ. ಮಕ್ಕಳು ಸಾವೀಗಿಡಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆ ಪ್ರದೇಶದಲ್ಲಿ ಜೆನಿಟಿಕ್ ರಿಸರ್ಚ್ ನಡೆಸುವಂತೆ ಸೂಚಿಸಿದ್ದರು. ಅಲ್ಲದೇ ಆರೋಗ್ಯ ಇಲಾಖೆಯಿಂದ ತಜ್ಞರ ತಂಡ ಕಳುಹಿಸಿ ರೋಗಕ್ಕೆ ತುತ್ತಾದವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದರು.
ಒಂದು ವರ್ಷದ ಹಿಂದೆ ಈ ಕಾಯಿಲೆ ಪತ್ತೆಯಾ ಗಿತ್ತು. ಜಿಲ್ಲೆ ಹಾಗೂ ರಾಜ್ಯ ಮಟ್ಟದ ತಂಡಗಳು ಈ ಗ್ರಾಮಗಳಿಗೆ ತೆರಳಿ ಅಧ್ಯಯನ ನಡೆಸಿದಾಗ ಇದು ಜೆರೋಡರ್ಮಾ ಪಿಗ್ಮೆಂಟೋಸಂ ಎಂಬುದು ಪತ್ತೆ ಯಾಯಿತು. ಜಿಲ್ಲೆಯಲ್ಲಿ ಮಾತ್ರ ಈ ಕಾಯಿಲೆಯಿದೆ ಎಂದು ತಿಳಿಯಲಾಗಿತ್ತು. ಆದರೆ ಹೆಚ್ಚಿನ ಪರಿಶೀಲನೆ ಮಾಡಿದಾಗ ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲೂ ಈ ಕಾಯಿಲೆ ಬೆಳಕಿಗೆ ಬಂದಿದೆ.
ಕಾಯಿಲೆಗೆ ಕಾರಣ?: ಈ ಕಾಯಿಲೆ ಆನುವಂಶಿಕ ವಾಗಿ ಬರುವಂಥದ್ದು. ಆಟೋಜೋಮಲ್ ರಿಸೆಸಿವ್ ಜೆನೆಟಿಕ್ ಡಿಸಾರ್ಡರ್ ಇರುವ ತಂದೆ ಅಥವಾ ತಾಯಿಯ ಡಿಎನ್‌ಎನಲ್ಲಿ ಈ ಕಾಯಿಲೆ ಇರುವ ಜೀನ್ ಇರುತ್ತದೆ. ತಂದೆ ಮತ್ತು ತಾಯಿ ಇಬ್ಬರಿಗೂ ಈ ಕಾಯಿಲೆಯ ಜೀನ್ ಇದ್ದಾಗ ಅವರಿಗೆ ಹುಟ್ಟುವ ಮಕ್ಕಳಲ್ಲಿ ಶೇ. 25ರಷ್ಟು ಈ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ತಂದೆ ಅಥವಾ ತಾಯಿ ಒಬ್ಬರಿಗೆ ಇದ್ದಾಗ ಈ ಕಾಯಿಲೆ ಮಗುವಿಗೆ ಬರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಸ್. ಚಿದಂಬರ ತಿಳಿಸಿದರು.
ಮಗು ಹುಟ್ಟಿದ 2 – 3 ತಿಂಗಳಲ್ಲೇ ಈ ಕಾಯಿಲೆ ಇರುವುದು ಗೊತ್ತಾಗುತ್ತದೆ. ಮಗುವನ್ನು ಸೂರ್ಯನ ಕಿರಣಕ್ಕೆ ಬಿಟ್ಟಾಗ, ಪ್ರಖರ ಬೆಳಕಿನ ಲೈಟ್ ಬಿಟ್ಟಾಗ ಚರ್ಮದಲ್ಲಿ ಸನ್ ಬರ್ನ್ ಆಗುತ್ತದೆ. ಚರ್ಮ ಕಂದು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೇ ಚರ್ಮ ಗಟ್ಟಿಯಾಗುವುದು, ರ್ಯಾಶಸ್ ಆಗುತ್ತದೆ. ಕಣ್ಣಿನ ತೊಂದರೆ ಕಾಣಿಸಿಕೊಳ್ಳುತ್ತದೆ. ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾಯಿಲೆಯನ್ನು ಗುಣಪಡಿಸುವ ಸಾಧ್ಯತೆ ಅತ್ಯಂತ ವಿರಳ. ಹಾಗಾಗಿ ಇಂಥ ಮಗುವನ್ನು ಸೂರ್ಯನ ಬೆಳಕಿಗೆ ಒಡ್ಡದೇ, ಇರುವಷ್ಟು ದಿನ ಸಲಹಿಕೊಂಡು ಹೋಗಬೇಕಾಗುತ್ತದೆ.
ಈ ಕಾಯಿಲೆ ತಡೆಗಟ್ಟಲು ಸಾಧ್ಯ: ಈ ಕಾಯಿ ಲೆಯನ್ನು ಮುಂದಿನ ಪೀಳಿಗೆಗೆ ಹೋಗದಂತೆ ತಡೆ ಗಟ್ಟುವುದು ಸಾಧ್ಯ. ಈ ಜೀನ್ಸ್ ಇರುವ ಗಂಡು- ಹೆಣ್ಣು ಮದುವೆಯಾಗಬಾರದು. ಅಲ್ಲದೇ ಯಾರೇ ಆಗಲೀ ಹತ್ತಿರದ ಸಂಬಂಧಗಳಲ್ಲಿ ವಿವಾಹವಾಗ ಬಾರದು. ಈ ಕಾಯಿಲೆ ಕಂಡು ಬಂದ ಪ್ರದೇ ಶಗಳಲ್ಲಿ ಮಗು ಗರ್ಭದಲ್ಲಿರುವ ಮೂರು ತಿಂಗಳ ಒಳಗೆ ಜೆನೆಟಿಕ್ ಪರೀಕ್ಷೆ ಮಾಡಬೇಕು.
ಕೆ.ಎಸ್. ಬನಶಂಕರ ಆರಾಧ್ಯ