ಮೂಡುಬಿದಿರೆ : ಸಂಘಟನೆಯೊಂದರ ನಾಯಕ ಶರಣ್ ಪಂಪ್ ವೆಲ್ ಬಗ್ಗೆ ಯಾರೋ ರಚಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಟ್ರೋಲ್ ಮಾಡಿದ ಚಿತ್ರಣವೊಂದನ್ನು ಅನ್ಯರಿಗೆ ಫಾರ್ವರ್ಡ್ ಮಾಡಿದ ಆರೋಪದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ, ಯುವ ವಕೀಲ ಜಯ ಕುಮಾರ್ ಶೆಟ್ಟಿ ಅವರನ್ನು ಮಂಗಳವಾರ ರಾತ್ರಿ ಅವರ ಮನೆಯಿಂದ ವಶಕ್ಕೆ ತೆಗೆದುಕೊಂಡ ಪ್ರಕರಣವನ್ನು ಮಾಜಿ ಸಚಿವ ಕೆ. ಅಭಯಚಂದ್ರ ತೀವ್ರವಾಗಿ ಖಂಡಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಇಂದು(ಬುಧವಾರ, ಜೂನ್ 2) ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಪ್ರಕರಣದಲ್ಲಿ ದ.ಕ. ಜಿಲ್ಲಾಡಳಿತ ಆಡಳಿತಾರೂಢ ಬಿಜೆಪಿಯ ಕೈಗೊಂಬೆಯಾಗಿರಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಮಂಡಳಿ ಪರೀಕ್ಷೆಗಳ ಕುರಿತಂತೆ ಅತಿ ಶೀಘ್ರದಲ್ಲಿಯೇ ತೀರ್ಮಾನ: ಸಚಿವ ಎಸ್.ಸುರೇಶ್ ಕುಮಾರ್
ಸುಪ್ರೀಂ ಕೋರ್ಟಿನ ಪ್ರಕಾರ ಜಾಲತಾಣಗಳ ಸಂದೇಶವನ್ನು ಹಂಚಿಕೊಳ್ಳುವುದು ತಪ್ಪಲ್ಲ ಎಂದಿರುವಾಗ ಜಯಕುಮಾರ್ ಶೆಟ್ಟಿ ಮಾಡಿರುವುದು ಅಪರಾಧ ಹೇಗಾಗುತ್ತದೆ ? ಎಂದ ಅವರು, ಮೂಡುಬಿದಿರೆ ಮಾತ್ರವಲ್ಲ ಸುಳ್ಯ, ಬೆಳ್ತಂಗಡಿ ಮೊದಲಾದ ಕಡೆಗಳಿಂದಲೂ ಕಾಂಗ್ರೆಸ್ ನಾಯಕರನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ. ರಾಜಕಾರಣಿಗಳನ್ನು ಓಲೈಸಲು ಜಿಲ್ಲಾಡಳಿತ ಹೀಗೆಲ್ಲ ಮಾಡುತ್ತಿದೆ. ಇದು ಆಡಳಿತ ಯಂತ್ರದ ದುರುಪಯೋಗ ಎಂದು ಅವರು ಆಪಾದಿಸಿದರು. `ಐ ಹೇಟ್ ದೆಮ್’ ಎಂದು ಉದ್ಗರಿಸಿದ್ದಾರೆ.
ಬಿಜೆಪಿಯವರ ರಾಸಲೀಲೆ, ಮೋಸ, ಭ್ರಷ್ಟಾಚಾರ ಮೊದಲಾದ ವಿಚಾರಗಳನ್ನು ಯಾರೂ ಪ್ರಶ್ನಿಸಬಾರದು ಎಂಬ ವಾತಾವರಣ ಇದೆ. ರಾಜ್ಯದಲ್ಲಿ ಸರಕಾರವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಆಮ್ಲಜನಕ ಕೊರತೆಯಿಂದ ಚಾಮರಾಜನಗರದಲ್ಲಿ ಆಗಿರುವ ಜನರ ಮಾರಣ ಹೋಮಕ್ಕೆ ಸಂಬಂಧಿಸಿ ಅಲ್ಲಿನ ಮತ್ತು ಮೈಸೂರಿನ ಜಿಲ್ಲಾಧಿಕಾರಿಗಳ ಮೇಲೆ ಯಾವುದೇ ಕ್ರಮ ಜರಗಿಸಲಾಗದ ಕರ್ನಾಟಕ ಸರಕಾರಕ್ಕೆ ಏನು ನೈತಿಕ ಹೊಣೆಗಾರಿಕೆ ಇದೆ ಎಂದು ಕಿಡಿ ಕಾರಿದ್ದಾರೆ.
ಇನ್ನು, ಲಾಕ್ ಡೌನ್ ಅವಧಿ ಮುಗಿದ ಬಳಿಕ ಸರಕಾರದ, ಅಧಿಕಾರಿಗಳ ಇಂಥ ದುಂಡಾವರ್ತನೆಯ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಪಕ್ಷದ ವಕ್ತಾರ ರಾಜೇಶ್ ಕಡಲಕೆರೆ, ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಕೋವಿಡ್ ಲಾಕ್‌ಡೌನ್ ಆದ ಬೆಳಪು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ